
ಹಲ್ಲೆಗೊಳಗಾದ ಯುವಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿರುವ ಮಾಜಿ ಶಾಸಕ ಅಮೃತ ದೇಸಾಯಿ
ಧಾರವಾಡ: ತಾಲೂಕಿನ ಗರಗ ಪೊಲೀಸರು ಅಮಾಯಕ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು,ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹಲ್ಲೆಗೊಳಗಾದ ಯುವಕನ ಹೆಸರು ಕಾರ್ತಿಕ್ ಈಟಿ ಈತ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಗರಗ ಠಾಣೆ ಪೊಲೀಸರು ಆತನ ಮೇಲೆ ಮನಬಂದಂತೆ ಹಲ್ಲೆ ಮಾಡಿ, ಕಳ್ಳತನದ ಆರೋಪ ಹೊತ್ತುಕೊಳ್ಳುವಂತೆ ಒತ್ತಾಯಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಾರ್ತಿಕನ ಈಟಿ ಮೇಲೆ ಪೊಲೀಸರು ಮನಬಂದಂತೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಕಾರ್ತಿಕ್ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಪೋಷಕರು ಕಣ್ಣೀರಲ್ಲೇ ನೂರಾರು ಮಾತನ್ನು ಆಡಿದ್ದಾರೆ.
6 ತಿಂಗಳ ಹಿಂದೆ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿತ್ತು. ಅದೇ ಪ್ರಕರಣದಲ್ಲಿ ಪೊಲೀಸರು ಕಾರ್ತಿಕನನ್ನು ತೂರಿಸಲು ಹೊರಟು ಈ ರೀತಿ ಹಲ್ಲೆ ಮಾಡಿ ಅಮಾನುಷವಾಗಿ ನಡೆದುಕೊಂಡಿದ್ದಾರೆ, ಇದರಿಂದ ನಮಗೆ ತೀವ್ರ ಆತಂಕವಾಗಿದೆ ಎಂದು ಕುಟುಂಬಸ್ಥರು ನುಡಿದಿದ್ದಾರೆ.
3 ದಿನಗಳಿಂದ ಕಾರ್ತಿಕನನ್ನು ಪೊಲೀಸರು ಅಕ್ರಮ ಬಂಧನದಲ್ಲಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕೃತ್ಯ ಎಸಗಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಅಮೃತ್ ದೇಸಾಯಿ ಒತ್ತಾಯಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಅಮೃತ ದೇಸಾಯಿ ಭೇಟಿನೀಡಿ ಯುವಕನಿಗೆ ಹಾಗೂ ಆತನ ಪೋಷಕರಿಗೆ ಧೈರ್ಯ ತುಂಬಿ ಘಟನೆಯ ಮಾಹಿತಿ ಪಡೆದಿದ್ದಾರೆ!
ಗ್ಯಾಸ್ ಏಜೆನ್ಸಿಮಾಲೀಕರೇ ಆತ ಒಳ್ಳೇಯ ಹುಡುಗ ಎಂದು ಹೇಳಿದ್ದರೂ ಕೂಡ, ಪೊಲೀಸರ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ, ಈ ಘಟನೆಯ ತನಿಖೆ ನಡೆಸಿ ಪೊಲೀಸರ ವಿರುದ್ಧ ಸೂಕ್ತಕ್ರಮ ಜರುಗಿಸದಿದ್ದರೆ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆ ನೀಡಿದ್ದಾರೆ.
