ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಕರಿಯಮ್ಮ (45)ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದಿತ್ತು, ಆಕೆಯ ಮುಂಡ (ದೇಹ) ಮಾತ್ರ ಪತ್ತೆಯಾಗಿತ್ತು ಕಾರಣ ಚಿರತೆ ರುಂಡ (ತಲೆ) ಸಂಪೂರ್ಣ ತಿಂದಿತ್ತು.
ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ ಚಿರತೆ ದಾಳಿ ಆತಂಕ ಹಿನ್ನೆಲೆಯಲ್ಲಿ ಎಸಿಎಫ್, ಡಿಸಿಎಫ್ ಸೇರಿದಂತೆ ಲೆಪರ್ಡ್ ಟಾಸ್ಕ್ ಫೋರ್ಸ್ ಚಿರತೆ ಹಿಡಿಯಲು ಸಿದ್ದತೆಯನ್ನ ನಡೆಸಿದೆ ಎಂದು ಗೊಲ್ಲರಹಟ್ಟಿಗೆ ಭೇಟಿ ನೀಡಿದ್ದ ಎಸಿಎಫ್ ನಿಜಾಮುದ್ದೀನ್ ಹೇಳಿದರು.
ನಿನ್ನೆ ರಾತ್ರಿ ಬೆಂಕಿ ಹಾಕಿ ಮಹಿಳೆಯ ಶವ ಕಾಯುತ್ತಿದ್ದವರಿಗೆ ಅಕ್ಷರಶಃ ಚಿರತೆ ಪ್ರತ್ಯಕ್ಷವಾಗಿ ಶಾಕ್ ನೀಡಿತ್ತು. ಪೊಲೀಸ್ ಹಾಗೂ ಸಾರ್ವಜನಿಕರನ್ನು ಆ ಚಿರತೆ ಬೆದರಿಸಿ ಮೃತದೇಹವನ್ನು ಹೊತ್ತೊಯಲು ಯತ್ನಿಸಿದೆ. ಅಲ್ಲೇ ಇದ್ದ ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಗ್ರಾಮಸ್ಥರು ಚಿರತೆಯನ್ನು ಓಡಿಸಿದ್ದಾರೆ.
ಚಿರತೆ ದಾಳಿ ಘಟನೆಯಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ, ಅರಣ್ಯ ಇಲಾಖೆ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನುಷ್ಯರ ಮೇಲೆ ಪ್ರಾಣಿಗಳು ದಾಳಿ ನಡೆಸಿದಾಗ ಮಾತ್ರ ಬರುತ್ತಾರೆ, ಅರಣ್ಯ ಇಲಾಖೆ ಈ ತನಕ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

