ಧಾರವಾಡ: ಕರ್ನಾಟಕ ವಿಶ್ವಕರ್ಮ ಜನಸೇನಾ ಸಂಘದಿಂದ ಫೆ. 23ರಂದು ಬೆಳಗ್ಗೆ 9 ಗಂಟೆಗೆ ನಗರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ರಾಜ್ಯ ಮಟ್ಟದ ಪ್ರಥಮ 'ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶ' ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ. ಸೋಮಶೇಖರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕುಂಬಿಯ ಶ್ರೀ ಅಭಿನವ ಎಂ. ಸೋಮಶೇಖರ ನಾಗಲಿಂಗ ಸ್ವಾಮೀಜಿ, ತಿಂಥಣಿಯ ಶ್ರೀ ಮೌನೇಶ್ವರ ಸ್ವಾಮೀಜಿ ಹಾಗೂ ಯಾದಗಿರಿಯ ಶ್ರೀ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜದ ಸಾಧಕಿಯರನ್ನು ಸನ್ಮಾನಿಸಲಾಗುವುದು ಎಂದರು.
ವಿಶ್ವಕರ್ಮ ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಶ್ವಕರ್ಮರಿಗೆ ಆದ್ಯತೆ ನೀಡಬೇಕು. ವಿಶ್ವಕರ್ಮ ನಿಗಮಕ್ಕೆ 300 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಭಾಸ್ಕರ ಬಡಿಗೇರ, ಇತರರಿದ್ದರು.
