ಅಪ್ರಾಪ್ತ ಬಾಲಕಿ ಜೊತೆ ಪತ್ತೆಯಾಗಿದ್ದ ಯುವಕ ಪೊಲೀಸ್ ಠಾಣೆ ಶೌಚಾಲಯದಲ್ಲೇ ಆತ್ಮಹತ್ಯೆಗೆ ಶರಣು

ಭಾಸ್ಕರ ಪತ್ರಿಕೆ
0

ತಿರುವನಂತಪುರಂ: ಅಪ್ರಾಪ್ತ ಬಾಲಕಿಯ ಜೊತೆಗೆ ಸಿಕ್ಕಿಬಿದ್ದಿದ್ದ ಯುವಕ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ವಯನಾಡಿನ ಅಂಬಲವಯಲ್ ಪ್ರದೇಶದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿಯ ನಾಪತ್ತೆಯಾಗಿರುವ ಹಿನ್ನೆಲೆ ವ್ಯಕ್ತಿಯೊಬ್ಬರು ನೀಡಿರುವ ದೂರಿನ ತನಿಖೆ ನಡೆಸಿದ ಪೊಲೀಸರು ಕೋಝಿಕ್ಕೋಡ್ ನಿಂದ ಯುವಕ ಗೋಕುಲ್ ಹಾಗೂ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ಕಲ್ಪೆಟ್ಟಾ ಪೊಲೀಸ್ ಠಾಣೆಗೆ ಕರೆತಂದಿದ್ದರು.

ಠಾಣೆಗೆ ಕರೆತಂದ ಅಪ್ರಾಪ್ತ ಬಾಲಕಿಯನ್ನು ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಯುವಕ  ಅಪ್ರಾಪ್ತ ಬಾಲಕಿಯ ಜೊತೆಗೆ ಪತ್ತೆಯಾಗಿರುವ ಹಿನ್ನೆಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೋ) ಅಡಿಯಲ್ಲಿ ವಿಚಾರಣೆ ಮತ್ತು ವಿವರ ಸಂಗ್ರಹಿಸಲು ಠಾಣೆಯಲ್ಲಿ ಬಂಧಿಸಲಾಗಿತ್ತು. ರಾತ್ರಿಯಾಗಿರುವ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ.

ಮಂಗಳವಾರ ಮುಂಜಾನೆ ಗೋಕುಲ್ ಶೌಚಾಲಯಕ್ಕೆ  ಹೋಗಿದ್ದ. ಆದರೆ, ಆತ ಹಿಂದುರುಗದಿದ್ದಾಗ ಅನುಮಾನಗೊಂಡು ಕಾನ್ ಸ್ಟೇಬಲ್ ಗಳು ಆತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಆತ ತನ್ನ ಶರ್ಟ್ ನಿಂದಲೇ ನೇಣುಬಿಗಿದುಕೊಂಡಿರುವುದು ಪತ್ತೆಯಾಗಿತ್ತು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*