ಮಂಗಳೂರಿನಲ್ಲಿ ಗುಂಪು ಹತ್ಯೆ: 20 ಮಂದಿ ಆರೋಪಿಗಳ ಬಂಧನ: ಕ್ರಿಕೆಟ್ ಮೈದಾನದಲ್ಲಿ 30 ಜನರಿಂದ ಯುವಕನ ಬರ್ಬರ ಹತ್ಯೆ

ಭಾಸ್ಕರ ಪತ್ರಿಕೆ
0

ಮಂಗಳೂರು: ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಯುವಕನೊಬ್ಬ ಸುಮಾರು 30 ಜನರ ಗುಂಪಿನಿಂದ ಬರ್ಬರವಾಗಿ ಹತ್ಯೆಗೀಡಾಗಿರುವ ಆಘಾತಕಾರಿ ಘಟನೆ ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಭಾನುವಾರ ನಡೆದಿದೆ.

ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಹತ್ಯೆಗೀಡಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಈ ವ್ಯಕ್ತಿ ವಲಸೆ ಕಾರ್ಮಿಕನಾಗಿದ್ದಾನೆ ಎಂದು ತಿಳಿದು ಬಂದಿದೆ.

ಭಾನುವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಹಿನ್ನೆಲೆ ಪೊಲೀಸರು ಅನುಮಾನದ ಮೇರೆಗೆ ಶವಪರೀಕ್ಷೆ ನಡೆಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಬೆನ್ನಿನ ಭಾಗಕ್ಕೆ ಬಿದ್ದ ಬಲವಾದ ಏಟು, ಶಾಕ್ ಹಾಗೂ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕದೇ ಇರುವುದು ಮರಣಕ್ಕೆ ಕಾರಣ ಎಂದು ತಿಳಿದು ಬಂದಿತ್ತು.

ಗುಂಪು ಹತ್ಯೆ:

ಈ ಪ್ರಕರಣದ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದಾಗ, ಎ.27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದಿತ್ತು ಎನ್ನುವುದು ತಿಳಿದು ಬಂದಿದೆ. ಈ ವೇಳೆ ಅಶ್ರಪ್ ಹೇಳಿದ ಯಾವುದೋ ಮಾತಿಗೆ ಸಂಬಂಧಿಸಿದಂತೆ ಸಚಿನ್ ಎಂಬ ವ್ಯಕ್ತಿಯೊಂದಿಗೆ ವಾಗ್ವಾದ ನಡೆದಿತ್ತು. ಈ ವೇಳೆ ಆತನ ಸಹಚರರು ಹಲ್ಲೆ ನಡೆಸಿದ್ದು, ಓಡಿ ಹೋಗಲು ಯತ್ನಿಸಿದ ವೇಳೆ ಸುಮಾರು 30 ಮಂದಿ ಸೇರಿ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ.  ಗುಂಪಿನಲ್ಲಿದ್ದವರು ಕೈಯಿಂದ ಹಾಗೂ ಕಟ್ಟಿಗೆಯಿಂದ ಹೊಡೆದು ಕಾಲಿನಿಂದ ಒದ್ದು ಗಂಭೀರವಾಗಿ ಹಲ್ಲೆ ನಡೆಸಿದ್ದರು. ಕೆಲವರು ತಡೆಯಲು ಯತ್ನಿಸಿದರೂ, ನಿರಂತರ ಹಲ್ಲೆ ನಡೆಸಲಾಗಿತ್ತು. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ರಫ್ ಸಾವಿಗೀಡಾಗಿರುವುದಾಗಿ  ಪೊಲೀಸರು ತಿಳಿಸಿದ್ದಾರೆ.

ಗುರುತು ಪತ್ತೆ:

ಮಂಗಳೂರು ನಗರ ಹೊರವಲಯದ ಕುಡುಪು ಬಳಿ ಹತ್ಯೆಗೀಡಾದ ವ್ಯಕ್ತಿ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಎಂದು ಗುರುತು ಪತ್ತೆ ಮಾಡಲಾಗಿದೆ. ಕೇರಳದ ವಯನಾಡಿನ ಪುಲ್ಪಳ್ಳಿ ಎಂಬಲ್ಲಿನ ಅಶ್ರಫ್ ಎಂಬಾತನಿಗೂ ಕುಡುಪು ಬಳಿ ಕೊಲೆಯಾದ ವಲಸೆ ಕಾರ್ಮಿಕನ ಫೋಟೋಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆ  ಅಶ್ರಫ್‌ ನ ಮನೆಯವರು ಮಂಗಳೂರಿಗೆ ಆಗಮಿಸಿ, ಗುರುತುಪತ್ತೆ ಮಾಡಿದ್ದಾರೆ.

20 ಮಂದಿ ಆರೋಪಿಗಳ ಬಂಧನ:

ಮಂಗಳೂರು ಹೊರವಲಯದ ಕುಡುಪು ಬಳಿ ವ್ಯಕ್ತಿಯೊಬ್ಬನನ್ನು  30 ಜನರಿಗೂ ಅಧಿಕ ಇದ್ದ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ದೃಢಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ಕುಡುಪು ಕಟ್ಟೆಯ ಸಚಿನ್ ಟಿ, ದೇವದಾಸ್, ದೀಕ್ಷಿತ್ ಕುಮಾರ್, ಶ್ರೀದತ್ತ, ಧನುಷ್, ನೀರುಮಾರ್ಗ ಸುಬ್ರಹ್ಮಣ್ಯ ನಗರದ ಸಾಯಿದೀಪ್, ಕುಡುಪು ಮಂಗಳನಗರದ ನಿತೀಶ್ ಕಮಾರ್ ಯಾನೆ ಸಂತೋಷ್, ಮಂಜುನಾಥ್, ವಾಮಂಜೂರು ದೇವರಪದವಿನ ಸಂದೀಪ್, ಕುಡುಪು ಪ್ರಾತಸೈಫ್ ಕಾಲನಿಯ ವಿವಿಯನ್ ಅಲ್ವಾರಿಸ್, ಬಿಜೈ ಕದ್ರಿ ಕೈಬಟ್ಟಲು ನಿವಾಸಿ ರಾಹುಲ್, ಕುಲಶೇಖರ ಜ್ಯೋತಿನಗರದ ಪ್ರದೀಪ್ ಕುಮಾರ್, ಶಕ್ತಿನಗರದ ಪದವು ನಿವಾಸಿ ಮನೀಶ್ ಶೆಟ್ಟಿ, ಕುಲಶೇಖರ ಚೌಕಿಯ ದೀಕ್ಷಿತ್, ಕುಡುಪು ದೇವಸ್ಥಾನದ ಬಳಿಯ ಕಿಶೋರ್ ಕುಮಾರ್, ಕೈಕಂಬದ ಯತಿರಾಜ್, ವಾಮಂಜೂರಿನ ಸಚಿನ್, ಕುಲಶೇಖರ ಪದವಿನ ಅನಿಲ್, ಕುಡುಪುಕಟ್ಟೆಯ ಸುಶಾಂತ್ ಹಾಗೂ ಕುಡುಪು ನಿವಾಸಿ ಆದರ್ಶ ಬಂಧಿತರು ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*