ನಾವಿಲ್ಲಿ ಕಷ್ಟದಲ್ಲಿದ್ದೇವೆ, ನೀವು ಹೇಗೆ ಸಂಭ್ರಮಿಸುತ್ತೀರಿ ಎಂದು ಗುಂಡು ಹಾರಿಸಿಯೇ ಬಿಟ್ಟ!

ಭಾಸ್ಕರ ಪತ್ರಿಕೆ
0

ಬೆಂಗಳೂರು: ನಾವಿಲ್ಲಿ ಕಷ್ಟದಲ್ಲಿದ್ದೇವೆ. ನೀವು ಹೇಗೆ ಸಂಭ್ರಮಿಸುತ್ತೀರಿ ಎಂದು ಪತಿಗೆ ಗುಂಡು ಹೊಡೆದೇ ಬಿಟ್ಟರು ಎಂದು ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭರತ್ ಅವರ ಪತ್ನಿ ಡಾ. ಸುಜಾತಾ ಕಣ್ಣೀರು ಹಾಕಿದ್ದಾರೆ.

ನಾವು ಮಂಗಳವಾರ ಬೆಳಿಗ್ಗೆ ಪಹಲ್ಗಾಮ್‌ಗೆ ಹೋಗಿದ್ದೆವು. ಅಲ್ಲಿಂದ ನಾವು ಪೈನ್ ಮರಗಳಿಂದ ಆವೃತವಾದ ಬೈಸರನ್ ಎಂಬ ದೊಡ್ಡ ಹುಲ್ಲುಗಾವಲು ತಲುಪಿದೆವು. ಅದು ಮಿನಿ ಸ್ವಿಟ್ಜರ್‌ ಲ್ಯಾಂಡ್‌ನಂತೆ ಕಾಣುತ್ತಿತ್ತು. ಪ್ರವಾಸಿಗರು ಸಾಂಪ್ರದಾಯಿಕ ಕಾಶ್ಮೀರಿ ಉಡುಪನ್ನು ಧರಿಸಿ ಫೋಟೋಗಳನ್ನು ತೆಗೆದುಕೊಳ್ಳಲು ಹಲವಾರು ಟೆಂಟ್ ಗಳಿದ್ದವು. ಮಧ್ಯಾಹ್ನ 1.30 ಆಗಿದ್ದರಿಂದ ಹಸಿವಾಗಿತ್ತು. ಹೀಗಾಗಿ ಹಿಂತಿರುಗಲು ನಿರ್ಧರಿಸಿದ್ದೆವು. ಈ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಶಬ್ಧ ಕೇಳಿಸಲು ಆರಂಭವಾಯಿತು. ಮೊದಲಿಗೆ ಪಟಾಕಿ ಶಬ್ಧವಿರಬೇಕು, ಕಾಡು ಪ್ರಾಣಿಗಳ ಹೆದರಿಸಲು ಸಿಡಿಸುತ್ತಿರಬಹುದು ಎಂದೇ ಎಲ್ಲರೂ ಭಾವಿಸಿದ್ದೆವು. ಆದರೆ, ಶಬ್ಧ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಳಿಕ ದಾಳಿ ನಡೆಸಲಾಗಿದೆ ಎಂಬುದು ನಮಗೆ ತಿಳಿಯಿತು. ಅಡಗಿಕೊಳ್ಳಲು ಟೆಂಟ್ ಕಡೆಗೆ ಓಡಿದೆವು.

ನಮ್ಮಿಂದ ಸುಮಾರು 500 ಮೀಟರ್ ದೂರದಲ್ಲಿ ಮತ್ತೊಂದು ಜೋಡಿಯಿತ್ತು. ಅಲ್ಲಿ ಒಬ್ಬ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಿದರು. ಕೆಲವು ಕ್ಷಣಗಳ ನಂತರ ಓರ್ವ ಭಯೋತ್ಪಾದಕ ನನ್ನ ಗಂಡನ ಹಿಂದೆ ನಿಂತನು. ಭರತ್ ನನಗೆ ‘ಚಿಂತಿಸಬೇಡಿ. ಶಾಂತವಾಗಿರಿ ಎಂದು ಹೇಳುತ್ತಲೇ ಇದ್ದರು. ಅವರು ನಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ನನಗೆ ಮಗುವಿದೆ, ದಯವಿಟ್ಟು ಗುಂಡು ಹಾರಿಸಬೇಡಿ’ ಎಂದು ಹೇಳಿದರು. ನಮ್ಮ ಮಗನನ್ನು ಸಹ ತೋರಿಸಿದರು. ಆದರೆ, ಭಯೋತ್ಪಾದಕ ಭರತ್ ತಲೆಗೆ ಎರಡು ಬಾರಿ ಗುಂಡು ಹಾರಿಸಿದ. ನನ್ನ ಪತಿ ನಮ್ಮ ಕಣ್ಣ ಮುಂದೆಯೇ ನೆಲಕ್ಕುರುಳಿದರು. ನಾವಿಲ್ಲಿ ಕಷ್ಟದಲ್ಲಿರುವಾಗ ನೀವು ಹೇಗೆ ಸಂಭ್ರಮಿಸುತ್ತೀರಿ? ನೀವು ಇಲ್ಲಿಗೆ ಆನಂದಿಸಲು ಬಂದಿದ್ದೀರಿ ಎಂದು ಭಯೋತ್ಪಾದಕ ಹೇಳಿದ್ದು ನನಗೆ ಕೇಳಿಸಿತು ಎಂದು ಸುಜಾತಾ ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*