ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ: ಪರಾರಿಯಾಗಿದ್ದ ಲಾರಿ ಚಾಲಕನ ಬಂಧನ

ಭಾಸ್ಕರ ಪತ್ರಿಕೆ
0

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ್ದ ಆರೋಪಿಯನ್ನು ಕಿತ್ತೂರು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ಮಧುಕರ ಕೊಂಡಿರಾಮ ಸೋಮವಂಶ (65) ಬಂಧಿತ ಆರೋಪಿಯಾಗಿದ್ದಾನೆ. ಅಪಘಾತ ಎಸಗಿದ ಲಾರಿಯನ್ನೂ ಸಹ ಕಿತ್ತೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಜ.14 ರಂದು ಬೆಳಗ್ಗಿನ ಜಾವ ಹೆಬ್ಬಾಳ್ಕರ್ ಕಾರಿಗೆ ತಾಗಿಸಿ ಲಾರಿ ಚಾಲಕ ಪರಾರಿಯಾಗಿದ್ದ.

ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವೂ ಸಹ ಆಗಿತ್ತು.

ಈ ಕುರಿತು ಸಚಿವೆ ಹೆಬ್ಬಾಳ್ಕರ್ ಅವರ ಕಾರು ಚಾಲಕ ಶಿವಪ್ರಸಾದ್ ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರಿನ ಅನ್ವಯ ಪ್ರಕರಣದ ವಿಚಾರಣೆ ಆರಂಭಿಸಿದ್ದ ಕಿತ್ತೂರು ಠಾಣೆ ಪೊಲೀಸರು ಹಿರೇಬಾಗೇವಾಡಿ ಟೋಲ್ ಬಳಿಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ 69 ಲಾರಿ ಚಾಲಕರ ವಿಚಾರಣೆ ನಡೆಸಿದ್ದರು.

ಸಚಿವರ ಕಾರಿಗೆ ಕ್ಯಾಂಟರ್ ಡಿಕ್ಕಿಯಾದಾಗ ಕ್ಯಾಂಟರಿನ ನೀಲಿ ಬಣ್ಣ ಕಾರಿಗೆ ಅಂಟಿಕೊಂಡಿತ್ತು. ಸಿಕ್ಕ ಸಾಕ್ಷಿಗಳನ್ನು ಪೊಲೀಸರು ಎಫ್ ಎಸ್ ಎಲ್ ಗೆ ರವಾನಿಸಿದ್ದರು. ಆನಂತರ ಸ್ಥಳದಲ್ಲಿದ್ದ ಎಲ್ಲಾ ಸಾಕ್ಷಿಗಳನ್ನು ಪಡೆದುಕೊಂಡು ಆತನಿಗಾಗಿ ಹುಡುಕಾಟ ನಡೆಸಿದ್ದರು. ಇತ್ತೀಚೆಗೆ, ಆತನ ವಾಸಸ್ಥಳದ ಬಗ್ಗೆ ನಿಖರವಾಗಿ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*