ಮಂಗಳೂರು: ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ.ಕ. ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಸೇರಿದಂತೆ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ದ.ಕ. ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಓಂಶ್ರೀ(24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್(23) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ತಲಪಾಡಿ ಕಡೆಯಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ವೇಳೆ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಕಾರಿನಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದರು. ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಇಟೆಲಿ ಪ್ರಜೆ ಸಹಿತ ಮೂವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

