ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ತಂದೆಯ ಗುಂಡೇಟಿಗೆ ಬಲಿ!

ಭಾಸ್ಕರ ಪತ್ರಿಕೆ
0

ಗುರುಗ್ರಾಮ್:  ಟೆನಿಸ್ ಆಟಗಾರ್ತಿಯನ್ನು ಆಕೆಯ ತಂದೆಯೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುಗ್ರಾಮದ ಸುಶಾಂತ್ ಲೋಕ್‌ ನಲ್ಲಿ ನಡೆದಿದೆ.

ಗುರುಗ್ರಾಮದ ಸುಶಾಂತ್ ಲೋಕ್–ಹಂತ 2 ರಲ್ಲಿ ವಾಸಿಸುತ್ತಿದ್ದ ತಂದೆ ದೀಪಕ್ ಯಾದವ್ ತನ್ನ ಮಗಳು ರಾಧಿಕಾ ಯಾದವ್ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದು, ಈ ಪೈಕಿ ಮೂರು ಗುಂಡುಗಳು ರಾಧಿಕಾ ಅವರನ್ನು ಬಲಿ ಪಡೆದಿವೆ.

ಮಹಿಳೆಯೊಬ್ಬರು ಗುಂಟೇಡಿನಿಂದ ಗಾಯಗೊಂಡಿರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಹತ್ಯೆಗೀಡಾದ ರಾಧಿಕಾ ಯಾದವ್ ಟೆನಿಸ್ ಅಕಾಡೆಮಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದೀಪಕ್ ತನ್ನ ಮಗಳು ಟೆನಿಸ್ ಅಕಾಡೆಮಿ ನಡೆಸುತ್ತಿರುವುದಕ್ಕೆ ಅಸಮಾಧಾನಗೊಂಡು ಅದನ್ನು ಮುಚ್ಚುವಂತೆ ಒತ್ತಾಯಿಸುತ್ತಿದ್ದ ಈ ವಿಚಾರಕ್ಕೆ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಹತ್ಯೆಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.

ಕೃತ್ಯಕ್ಕೆ ಬಳಸಿದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರವಾನಗಿ ಪಡೆದ ಗನ್ ನಿಂದಲೇ ದೀಪಕ್  ಯಾದವ್ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ಕೃತ್ಯ ನಡೆಸಲಾಗಿದೆ.

ರಾಧಿಕಾ ಯಾದವ್ ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿಯಾಗಿದ್ದು, ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*