ಪ್ರವಾಹದಿಂದ ಪತ್ನಿ, ತಾಯಿ, ಮಕ್ಕಳನ್ನು ರಕ್ಷಿಸಿ ಪ್ರಾಣ ತ್ಯಾಗ ಮಾಡಿದ ಯುವಕ!

ಭಾಸ್ಕರ ಪತ್ರಿಕೆ
0

ಟೆಕ್ಸಾಸ್:  ನಲ್ಲಿ ಭಾರೀ ಪ್ರವಾಹಕ್ಕೆ ಸಾವಿನ ಸಂಖ್ಯೆ 100 ದಾಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಜುಲೈ 4ರ ರಜಾದಿನದಂದೇ ಸಂಭವಿಸಿದ ಈ ದುರಂತದಲ್ಲಿ, ನದಿ ತೀರದಲ್ಲಿ ಬೇಸಿಗೆ ಶಿಬಿರದಲ್ಲಿದ್ದ 27 ಬಾಲಕಿಯರು, ಇತರರು ನೀರುಪಾಲಾಗಿದ್ದಾರೆ. ಈ ದುರಂತದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆಯಾಗಿದೆ.

ಇಲ್ಲೊಬ್ಬ ಟೆಕ್ಸಾಸ್ ನಿವಾಸಿ ತನ್ನ ಕುಟುಂಬವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಇದು ಟೆಕ್ಸಾಸ್‌ ನ ಜೂಲಿಯನ್ ರಯಾನ್(Julian Ryan) ಎಂಬ 27 ವರ್ಷದ ವ್ಯಕ್ತಿ ಪ್ರವಾಹದಿಂದ ತನ್ನ ಪತ್ನಿ ಕ್ರಿಸ್ಟಿನಿಯಾ ವಿಲ್ಸನ್, ಮಕ್ಕಳು ಮತ್ತು ತಾಯಿಯನ್ನು ರಕ್ಷಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

ಗ್ವಾಡಾಲುಪೆ ನದಿಯ ಅಬ್ಬರದಿಂದ ಏಕಾಏಕಿ ಪ್ರವಾಹ ಸೃಷ್ಟಿಯಾಗಿತ್ತು. ರಯಾನ್ ಮತ್ತು ಆತನ ಕುಟುಂಬದ ಮನೆಯೊಳಗೆ ನೀರು ನುಗ್ಗಿ ನೀರಿನಲ್ಲಿ ಕುಟುಂಬ ಕೊಚ್ಚಿ ಹೋಗಲು ಆರಂಭಿಸಿದ್ದರು. ನೀರು ಒಳ ಬಾರದಂತೆ ಬಾಗಿಲು ಹಾಕಿದರೂ, ಮನೆಯೊಳಗೆ ವೇಗವಾಗಿ ನೀರು ನುಗ್ಗಲು ಆರಂಭಿಸಿತು. 911ಗೆ ಸಹಾಯಕ್ಕಾಗಿ ಕರೆ ಮಾಡಿದರೂ, ಸಿಬ್ಬಂದಿ ತಕ್ಷಣಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗುತ್ತಲೇ ಇತ್ತು.

ಈ ವೇಳೆ ರಯಾನ್ ತನ್ನ ಕುಟುಂಬವನ್ನು ಮನೆಯ ಮೇಲ್ಛಾವಣಿ ಮೇಲೆ ಹತ್ತಿಸಲು ನಿರ್ಧರಿಸಿದರು. ಮನೆಯ ಕಿಟಕಿ ಒಡೆಯಲು ಮುಂದಾದಾಗ ಕೈಗೆ ಏನು ಸಿಗಲಿಲ್ಲ. ಹೀಗಾಗಿ ಬರೀಗೈಯಲ್ಲೇ ಗಾಜನ್ನು ಬಲವಾಗಿ ಒಡೆದು ಹಾಕಿದರು. ಆದರೆ ಈ ನಿರ್ಧಾರ ಅವರ ಪ್ರಾಣಕ್ಕೇ ಕುತ್ತು ತಂದಿದೆ. ಏಟಿನ ವೇಗಕ್ಕೆ ಕೈಯ ರಕ್ತನಾಳ ಒಡೆದು ರಕ್ತ ಚಿಮ್ಮಿತ್ತು, ತೀವ್ರ ರಕ್ತಸ್ರಾವವಾದರೂ ಕುಟುಂಬಸ್ಥರನ್ನು ಚಾವಣಿಗೆ ತಲುಪಿಸಿದ ರಯಾನ್ ಗೆ ಛಾವಣಿ ಏರಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ, ಮೇಲೆ ಏರಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರನ್ನು ನೋಡುತ್ತಾ ರಯಾನ್ ಹೇಳಿದ್ದರಷ್ಟೇ ಅವರಿಗೆ ಪ್ರಜ್ಞೆ ತಪ್ಪಿತ್ತು.   ಕೆಲವು ಗಂಟೆಗಳ ನಂತರ, ನೀರು ಇಳಿದ ಮೇಲೆ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಬಂದರು. ಆದರೆ ಅಷ್ಟೊತ್ತಿಗೆ ಅಲ್ಲಿ ರಯಾನ್ ಶವ ಮಾತ್ರವೇ ಉಳಿದಿತ್ತು.  ರಯಾನ್ ನಿಜವಾದ ಹೀರೋ ಆಗಿ ಇತಿಹಾಸದ ಪುಟ ಸೇರಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರದ ಹವಾಮಾನ ಸಂಸ್ಥೆಗಳಿಗೆ ಅನುದಾನ ಕಡಿತಗೊಳಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ವಿಮರ್ಶಕರು ದೂರುತ್ತಿದ್ದಾರೆ. ಆದರೆ ಅಧ್ಯಕ್ಷ ಟ್ರಂಪ್ ಈ ಪ್ರವಾಹವನ್ನು ಶತಮಾನದ ದುರಂತ ಎಂದು ಕರೆದಿದ್ದು, ಇದನ್ನು ಯಾರೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಟೆಕ್ಸಾಸ್‌ ದುರಂತವನ್ನು ಪ್ರಮುಖ ವಿಪತ್ತು ಎಂದು ಘೋಷಿಸಿದ್ದು, ಸರಕಾರದಿಂದ ಹಣ ಬಿಡುಗಡೆ ಮಾಡಲು ಸಹಿ ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*