ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರ ಅಭಿವೃದ್ಧಿಗೆ ಭಕ್ತರ ಸಹಕಾರ ಕೋರಿದ ಅಭಿವೃದ್ಧಿ ಸಮಿತಿ

ಭಾಸ್ಕರ ಪತ್ರಿಕೆ
0

ಕೊರಟಗೆರೆ: ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಸ್ವಾಮಿಯ ಭಕ್ತರಿದ್ದಾರೆ. ಸಮಿತಿಯು ರಾಜ ಗೋಪುರ ಅಭಿವೃದ್ಧಿಗೆ ತೀರ್ಮಾನಿಸಿದ್ದು, ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ ತಿಳಿಸಿದರು.

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಾಲಯ ರಾಜಗೋಪುರ ನೀಲಿನಕ್ಷೆ ಈಗಾಗಲೇ ಸಿದ್ದವಾಗಿದೆ. 45 ಅಡಿ ಎತ್ತರ, 23 ಅಡಿ ಅಗಲ, ಬಾಗಿಲು ಕಲ್ಲು ಎತ್ತರ 16 ಅಡಿಯನ್ನು ಹೊಂದಿದೆ. ರಾಜಗೋಪುರ ಅಭಿವೃದ್ಧಿಗೆ ಗಾರೆ, ಸುಣ್ಣ, ಚಿನ್ನ, ಇಟ್ಟಿಗೆ, ಕಲ್ಲು, ಸಿಮೆಂಟ್ ಬಳಸಲಿದ್ದು, ಮುಜುರಾಯಿ ಇಲಾಖೆ ಒಳಪಟ್ಟ ದೇವಾಲಯವಾದ್ದರಿಂದ 10 ಲಕ್ಷ ನೀಡುವಂತೆ ಸಮಿತಿಯು ಈಗಾಗಲೇ ಮನವಿ ಮಾಡಿದೆ ಎಂದು ಹೇಳಿದರು.

ಗುತ್ತಿಗೆದಾರ ಮಹಾಲಿಂಗಪ್ಪ ಮಾತನಾಡಿ, ಕೊರಟಗೆರೆ ತಾಲ್ಲೂಕು ಪುಣ್ಯಕ್ಷೇತ್ರಗಳ ಬೀಡು. ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 45 ಅಡಿ ಎತ್ತರದ ರಾಜಗೋಪುರ ಅಭಿವೃದ್ಧಿಯು ಹಂಪಿ, ಬೇಲೂರು, ಹಳೇಬೀಡು ಪ್ರಸಿದ್ದ ವಾಸ್ತು ಕಲೆಗಳ ಶೈಲಿಯಲ್ಲಿ ನಿರ್ಮಾಣಗೊಳ್ಳಲಿದೆ. 15 ಲಕ್ಷ ವೆಚ್ಚದ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ರಥೋತ್ಸವದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಜ ಗೋಪುರ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ರಾಜಗೋಪುರ ದಾನಿ ಪ್ರವೀಣ್ ಮಾತನಾಡಿ, ರಾಜಗೋಪುರ ಅಭಿವೃದ್ಧಿಯು ತಂದೆಯ ಕನಸು. ಉದ್ಯಮಿಗಳ ಸಹಕಾರ ಪಡೆದು ಈ ಪುಣ್ಯ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದು, ಇತಿಹಾಸ ದೇವಾಲಯ ಅಭಿವೃದ್ಧಿಗೆ ಪ್ರತಿ ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು.

ಸಮಿತಿ ಸದಸ್ಯ ಜಯರಾಮ್ ಮಾತನಾಡಿ, ತಳಮಟ್ಟದಿಂದಲೂ ಸಮಿತಿ ದೇವಾಲಯ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಸ್ವಾಮಿಯ ದೇವಾಲಯಕ್ಕೆ ರಾಜಗೋಪುರ ಅಗತ್ಯತೆಯಿದ್ದು ಅಭಿವೃದ್ಧಿ ಕಾರ್ಯಕ್ಕೆ ಭಕ್ತರ ಸಹಕಾರ ಪ್ರಾಮುಖ್ಯತೆ ವಹಿಸಲಿದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಉಮಾಶಂಕರ್‌ ಆರಾಧ್ಯ, ಚಂದ್ರಶೇಖರಯ್ಯ,ರಾಘವೇಂದ್ರ, ಶ್ರೀರಾಮಯ್ಯ, ದ್ರಾಕ್ಷಾಯಿಣ  ರಾಜಣ್ಣ, ಡಿ.ಕೆ.ರಂಗನಾಥ್, ಶಿಲ್ಪಿ ಸುಜೇಂದ್ರ ಮಣಿ ಸೇರಿದಂತೆ ಇತರರು ಹಾಜರಿದ್ದರು.

ದೇಗುಲ ನಿರ್ಮಾಣ ಶಿಲ್ಪಿ ಸುಜೇಂದ್ರ ಮಣಿ ಮಾತನಾಡಿ,  ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ದೇವಾಲಯ ೪೫ ಅಡಿ ಎತ್ತರದ ರಾಜಗೋಪುರ ಅಭಿವೃದ್ಧಿ ಕಾರ್ಯಕ್ಕೆ ನೀಲಿ ನಕ್ಷೆಯಂತೆ ಕೆಲಸ ಪ್ರಾರಂಭಿಸಲಾಗಿದೆ. ದೊಡ್ಡ ಬಳ್ಳಾಪುರದ ಕೋಹಿನೂರುನಲ್ಲಿ ಬಂಡೆಯ ಕೆತ್ತನೆ ಕಾರ್ಯ ನಡೆಯುತ್ತಿದೆ. ಇಟ್ಟಿಗೆ, ಸುಣ್ಣ ಬಳಕೆಯಿಂದ 50 ಗೊಂಬೆಗಳ ವಾಸ್ತು ಕಲೆಗಳು ರಚನೆಯಾಗಲಿದೆ. ರಾಜಗೋಪುರವು ಸಂಪೂರ್ಣವಾಗಿ ಪುರಾತನ ಕಾಲದ ಇತಿಹಾಸವನ್ನು ತಿಳಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*