ಸರಗೂರು: ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ದೂರುಗಳ ಸುರಿಮಳೆ

ಭಾಸ್ಕರ ಪತ್ರಿಕೆ
0

ಸರಗೂರು: ಪಟ್ಟಣದ ನಾಲ್ಕನೇ ವಾರ್ಡಿನಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಸಮುದಾಯದ ಭವನದಲ್ಲಿ ಬುಧವಾರ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆಗಳ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕಳೆದ ಸಭೆಯಲ್ಲಿ ಪಡೆದ ಅರ್ಜಿಗಳಿಗೆ ಕೈಗೊಂಡ ಕ್ರಮದ ಬಗ್ಗೆ ತಿಳಿಸುವಂತೆ ಒತ್ತಾಯಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಕಂದಾಯ ಇಲಾಖೆ, ಗ್ರಾಪಂಗಳ ವಿರುದ್ಧ ಸಾರ್ವಜನಿಕರು ಹಾಗೂ ರೈತರಿಂದ ಸಾಲು ಸಾಲು ದೂರುಗಳ ಸುರಿಮಳೆಯಾಗಿದೆ.  ನಂತರ ಸಭೆ ಪ್ರಾರಂಭವಾಗಿ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಸ್ವೀಕಾರ ಮಾಡಲಾಯಿತು.

ಮನುಗನಹಳ್ಳಿ ಗ್ರಾ.ಪಂ. ಲಂಕೆ ರಮೇಶ್ ಮಾತನಾಡಿ ನಮ್ಮ ದೊಡ್ಡಪ್ಪನ ಹೆಸರಿನಲ್ಲಿ ಜಮೀನು ಇದೆ. ಅದರೆ ಅದನ್ನು ಬೇರೆಯವರಿಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಕಳೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿದರೂ ಯಾವುದೇ ಕಂದಾಯ ಇಲಾಖೆ ಬಂದಿಲ್ಲ ಎಂದರು.

ಪೌತಿಖಾತೆ ಮಾಡಲು ಹಾಗೂ ನೆಮ್ಮದಿ ಕೇಂದ್ರದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ. ಸ್ವಾಧೀನದಲ್ಲಿದ್ದು 53 ಮತ್ತು 57 ಅರ್ಜಿ ಸಲ್ಲಿಸಿದ್ದರೂ ಸಹ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ ಎಂದು ದೂರಿದರು.

ದಲಿತ ಮುಖಂಡ ಮಾತನಾಡಿ, ಶ್ರೀನಿವಾಸ ಸರಗೂರು ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿಲ್ಲ. ಎಂ.ಸಿ.ತಳಲು ನುಗು ನದಿಯಿಂದ ಯಶವಂತಪುರ ಗ್ರಾಮದವರೆಗೆ ನಿರ್ಮಾಣವಾಗಿರುವ ಸಣ್ಣ ಏತ ನೀರಾವರಿ ಯೋಜನೆ ಹಾಗೂ ಬಾಲನಕಟ್ಟೆ, ಗೂಡುಕಟ್ಟೆ, ಹಾಗೂ ಎಂ.ಸಿ.ತಳಲು ಕೆರೆ ಅಭಿವೃದ್ಧಿ ಪಡಿಸಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡಿಲ್ಲ ಕಳಪೆಯಾಗಿರುತ್ತದೆ. ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಇದರಿಂದ ಸರ್ಕಾರದ ಅನುದಾನ ನಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದರು.

ಹಾದನೂರು ಗ್ರಾ.ಪಂ. ಸದಸ್ಯ ಯಶವಂತಪುರ ಶಿವಲಿಂಗಯ್ಯ ಮಾತನಾಡಿ, ಯಶವಂತಪುರ ಗ್ರಾಮದ ಜಂಜರು ಸಂಖ್ಯೆ 25, 26/1, 66/1, 99 ರ ಸರ್ಕಾರಿ ಖಾಲಿ ನಿವೇಶನಗಳು ಅಕ್ರಮವಾಗಿ ಒತ್ತುವರಿಯಾಗಿವೆ. ಅವುಗಳ ರಕ್ಷಣೆ ಮಾಡಲು ಸಿಡಿಪಿಓ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಓರವರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಖಾಲಿ ನಿವೇಶನವನ್ನು ಗುರುತಿಸಬೇಕು. ಎಲ್ಲಾ ಸರ್ಕಾರಿ ಖಾಲಿ ನಿವೇಶನಗಳನ್ನು ಗುರುತಿಸಿ ನಾಮಫಲಕ ಅಳವಡಿಸಬೇಕು. ನೂತನ ಕಂದಾಯ ಗ್ರಾಮದಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿಲ್ಲ. ಚರಂಡಿ ನಿರ್ಮಾಣ ಮಾಡಲು ಅಡ್ಡಿಪಡಿಸುತಿದ್ದಾರೆ ಎಂದು ದೂರಿದರು.

ಮಹೇಶ್ ಮಾತನಾಡಿ, ಸರಗೂರು ಅಂಚೆ ಕಛೇರಿಯಲ್ಲಿ ಖಾತೆದಾರರಿಗೆ ಸುಮಾರು ಒಂದೂವರೆ ಕೋಟಿಯಷ್ಟು ಹಣ ವಂಚನೆ ಮಾಡಿದ್ದಾರೆ ಎಂದರು.

ದಸಂಸ (ಅಂಬೇಡ್ಕರ್ ವಾದ) ಸಂಘಟನೆ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಹಾಗೂ ಸೀರಮ್ಮ ಮಾತನಾಡಿ ಗಿರಿಜನ ಆಶ್ರಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಎಸ್ಸಿ.ಎಸ್ಟಿ ಸಭೆಗಳಿಗೆ ಆಹ್ವಾನಿಸುತ್ತಿಲ್ಲ. ತಾಲ್ಲೋಕಿನಾಧ್ಯಂತ ಹಾಡಿಗಳಲ್ಲಿ ಕಳಪೆ ಕಾಮಗಾರಿಗಳ ಹಾವಳಿ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹದ ಬಗ್ಗೆ ಅರಿವಿಲ್ಲ. ನಮ್ಮ ಹಾಡಿಜನರು ಇದರಿಂದಾಗಿ ಹೆಚ್ಚು ಜೈಲು ಪಾಲಾಗುತ್ತಿದ್ದಾರೆ ಈ ವಿಚಾರವಾಗಿ ಹಾಡಿಗಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಆದಿವಾಸಿಗಳು ದೂರು ಸಲ್ಲಿಸಿದರು.

ಮಂಜುನಾಥ ಮಾತನಾಡಿ ಪೋಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಹಳ್ಳಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡಲು ಸಹಕರಿಸುತ್ತಿದ್ದಾರೆ. ದೂರು ಸಲ್ಲಿಸಿದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಯಾವುದೇ ದೂರು ದಾಖಲಿಸದೆ ಹಣದ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಯುವಜನರು ಮಹಿಳೆಯರು ಕುಡಿತದ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

ನಂತರ ಲೋಕಾಯುಕ್ತ ಡಿಎಸ್ಪಿ ರವಿಕುಮಾರ್ ರವರು ಮಾತನಾಡಿ ಒಟ್ಟು 46 ದೂರುಗಳು ಬಂದಿವೆ. ಈ ಎಲ್ಲಾ ದೂರುಗಳಿಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಜವಾಬ್ದಾರಿ ವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಕ್ರಮಕೈಗೊಂಡು ವರದಿ ಮಾಡಬೇಕು, ಯಾವ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಪಡೆದುಕೊಂಡಲ್ಲಿ ತಮ್ಮ ಮೇಲೆ ಮೇಲಾಧಿಕಾರಿಗಳಿಗೆ ವರದಿ ಮಾಡಿ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರ್ ಮೋಹನ್ ಕುಮಾರಿ, ಲೋಕಾಯುಕ್ತ ಅಧಿಕಾರಿಗಳಾದ ವೆಂಕಟೇಶ್, ಡಿಎಸ್ಪಿ. ರವಿಕುಮಾರ್, ಇನ್ಸ್ಪೆಕ್ಟರ್, ಸರಗೂರು ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಡಿಎಸ್ ಎಸ್ ಅನುಷಾ, ಗೋವಿಂದ ಕುಡುಗಿ, ಮುಖಂಡರಾದ ಮಲ್ಲೇಶ್, ಇಟ್ನ ರಾಜಣ್ಣ, ಲಕ್ಷಣ್, ಬಿಲ್ಲಯ್ಯ, ನಾಗರಾಜು ಉಯ್ಯಂಬಳ್ಳಿ, ಕೆಂಡಗಣ್ಣಸ್ವಾಮಿ, ಗ್ರಾಮೀಣಾ ಮಹೇಶ್, ಸಣ್ಣಸ್ವಾಮಿ, ಸೋಮಣ್ಣ, ಚಿನ್ನಯ್ಯ, ಶ್ರೀನಿವಾಸ್, ವಾಲ್ಮೀಕಿ ಸಿದ್ದರಾಜು, ಪ್ರಭಾಕರ್, ರೈತ ಮುಖಂಡ ನಂದೀಶ ಬರಗಿ, ನವೀನ್, ಸರಗೂರು ಕೃಷ್ಣ, ಚನ್ನಾಯಕ, ಮಹಲಿಂಗ, ಸಾರ್ವಜನಿಕರೊಂದಿಗೆ ಇತರರು ಭಾಗವಹಿಸಿದ್ದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*