ಧರ್ಮಸ್ಥಳ: ಒಂದೆಡೆ ಧರ್ಮಸ್ಥಳ ಚಲೋ, ಇನ್ನೊಂದೆಡೆ ಸೌಜನ್ಯ ಮನೆಗೆ ಭೇಟಿ ಮೂಲಕ ರಾಜ್ಯ ಬಿಜೆಪಿ ಗಮನ ಸೆಳೆದಿದೆ. ಆದ್ರೆ ಸೌಜನ್ಯ ಮನೆಗೆ ಬಿಜೆಪಿ ನಾಯಕರು ಬಂದರು ,ಹೋದರು ಎಂಬಂತೆ ಬಂದು ಹೋಗಿದ್ದಾರೆ.
ಬಿಜೆಪಿ ನಾಯಕರು ಸೌಜನ್ಯ ಮನೆಗೆ ಭೇಟಿ ನೀಡಿರುವ ವಿಚಾರವಾಗಿ ಮಾಧ್ಯಮವೊಂದಕ್ಕೆ ಸೌಜನ್ಯ ತಾಯಿ ನೀಡಿದ ಹೇಳಿಕೆಯಲ್ಲಿ ಬಿಜೆಪಿ ನಾಯಕರ ಭೇಟಿಯ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದರು. ನಮ್ಮ ಯಾವುದೇ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋಗುವುದೇ ಆದರೆ, ಅದರ ಖರ್ಚು ಭರಿಸುವುದಾಗಿ ಅವರು ಹೇಳಿದರು. ಆದರೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದರು.
ಇನ್ನೂ ಸೌಜನ್ಯ ಹೆಸರು ಹೇಳಿಕೊಂಡು ಕಣ್ಣೀರು ಹಾಕಿ ದೊಡ್ಡ ಮನೆ ಕಟ್ಟಿದ್ದಾಳೆ ಎಂದು ಸೌಜನ್ಯ ತಾಯಿ ಬಗ್ಗೆ ಬಿಜೆಪಿ ನಾಯಕನೊಬ್ಬ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ವಿಚಾರವಾಗಿ ಪ್ರಶ್ನಿಸಿದ ಕುಸುಮಾವತಿ, ನಾವು ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರಂತೆ, ಆದ್ರೆ, ಬಿಜೆಪಿ ನಾಯಕರು ಯಾವುದೇ ಉತ್ತರ ನೀಡಲಿಲ್ಲ ಅಂತ ಕುಸುಮಾವತಿ ಹೇಳಿದ್ದಾರೆ.
ನಾನು ಕಳೆದ 13 ವರ್ಷಗಳಿಂದ ಯಾವುದೇ ರಾಜಕೀಯದವರ ಮೇಲಿನ ನಂಬಿಕೆ ಬಿಟ್ಟಿದ್ದೇನೆ. ನನಗೆ ಯಾರ ಮೇಲೂ ನಂಬಿಕೆ ಇಲ್ಲ, ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿ ಕೊಂದು ಎಸೆದ ಸಂದರ್ಭದಲ್ಲಿ ಬಿಜೆಪಿ ಸರ್ಕಾರವೇ ಇತ್ತು, ಆದರೆ ಆ ಸಂದರ್ಭದಲ್ಲಿ ಯಾರು ಕೂಡ ನಮ್ಮ ಮನೆಗೆ ಬಂದಿಲ್ಲ, ಈಗ ಬಂದು ನಾವು ನಿಮ್ಮ ಜೊತೆ ಇದ್ದೇವೆ ಎಂದರೆ ಖಂಡಿತಾ ನಾವು ನಂಬುವುದಿಲ್ಲ ಎಂದು ಅವರು ಹೇಳಿದರು.
ಹರೀಶ್ ಪೂಂಜಾ 2 ತಿಂಗಳಲ್ಲಿ ನಿಮಗೆ ನ್ಯಾಯ ದೊರಕಿಸಿಕೊಡ್ತೀನಿ ಅಂತ ಹಿಂದೆ ಹೇಳಿದ್ದರು. ಆದರೆ ಇವತ್ತಿನವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದ ಅವರು ಬಿಜೆಪಿ ನಾಯಕರ ಭೇಟಿ ಕೇವಲ ರಾಜಕೀಯ ಎಂದು ಅಭಿಪ್ರಾಯಪಟ್ಟರು.

