ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸೋಮವಾರ ಆರು ಅಭ್ಯರ್ಥಿಗಳ ಸಂಯೋಜಿತ ಪಟ್ಟಿಯನ್ನು ಪ್ರಕಟಿಸಿದೆ.
ಮಹಾರಾಷ್ಟ್ರಕ್ಕೆ ನಾಲ್ಕು ಮತ್ತು ಜಾರ್ಖಂಡ್ ಗೆ ಇಬ್ಬರು ಅಭ್ಯರ್ಥಿಗಳನ್ನು ಪಕ್ಷ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಕೊಲ್ಹಾಪುರ ಉತ್ತರದಿಂದ ಮಧುರಿಮರಾಜೆ ಮಾಲೋಜಿರಾಜೆ ಛತ್ರಪತಿ, ಅಕೋಲಾ ಪಶ್ಚಿಮದಿಂದ ಸಾಜಿದ್ ಖಾನ್ ಮನ್ನಾನ್ ಖಾನ್, ಕೊಲಾಬಾದಿಂದ ಹೀರಾ ದೇವಸಿ ಮತ್ತು ಸೋಲಾಪುರ ಸಿಟಿ ಸೆಂಟ್ರಲ್‌ನಿಂದ ಚೇತನ್ ನರೋಟೆ ಅವರನ್ನು ಕಾಂಗ್ರೆಸ್ ಘೋಷಿಸಿದೆ.
ಇದರೊಂದಿಗೆ 288 ವಿಧಾನಸಭಾ ಸ್ಥಾನಗಳಲ್ಲಿ 102 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್ಸಿಪಿಯನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಭಾಗವಾಗಿದೆ. ಎಂವಿಎ ಮೈತ್ರಿಕೂಟವು ಈವರೆಗೆ ೨೬೮ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಎಸ್ಪಿ) ಕ್ರಮವಾಗಿ 84 ಮತ್ತು 82 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನವೆಂಬರ್ 20 ರಂದು ನಡೆಯಲಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿತ್ತು. 2014ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗಳಿಸಿತ್ತು.

