ಕನಕಗಿರಿ ಭಾಗದ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಸ್ಥಗಿತ: ರೈತರ ಪರದಾಟಕ್ರಿಮಿಕೀಟಗಳ ಭೀತಿಯಲ್ಲಿ ರೈತರ ಕುಟುಂಬ

ಭಾಸ್ಕರ ಪತ್ರಿಕೆ
0




ಕನಕಗಿರಿ: ಕನಕಗಿರಿ ಭಾಗದ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಸ್ಥಗಿತಗೊಳಿಸುತ್ತಿರುವ ಕಾರಣ ಹೊಲಗದ್ದೆಗಳಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ರೈತಾಪಿ ಕುಟುಂಬಕ್ಕೆ ತೀವ್ರ ಸಮಸ್ಯೆಯಾಗಿದೆ. ವಿದ್ಯುತ್ ಕಡಿತ ಮಾಡದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜೆಸ್ಕಾಂ ಇಲಾಖೆಯ ಕಾರ್ಯಪಾಲಕ ಎಂಜಿನೀಯರ್ ಸಲೀಂ ಪಾಷಾ ಅವರಿಗೆ ಅಕ್ಟೋಬರ್-೩೦ ಬುಧವಾರ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮುಸ್ತಫ ಪಠಾಣ್ ಪ್ರಕಟಣೆಯಲ್ಲಿ ತಿಳಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಅವರು ಕನಕಗಿರಿ ಭಾಗದಲ್ಲಿ ಬರುವ ವಿವಿಧ ಗ್ರಾಮಗಳ ಜಮೀನುಗಳಲ್ಲಿ ರೈತರು ಮನೆ ಕಟ್ಟಿಕೊಂಡು, ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜು ಸ್ಥಗಿತವಾಗುತ್ತಿರುವುದರಿಂದ ರೈತರು ಸಮಸ್ಯೆಗೀಡಾಗುತ್ತಿದ್ದಾರೆ. ಕನಕಗಿರಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ರೈತರು ರಾತ್ರಿ ಹೊಲಗಳಿಗೆ ನೀರು ಹಾಯಿಸುವುದು, ಬೆಳೆ ಕಾಯುವಂತ ಕೆಲಸಕ್ಕೆ ಹೋಗುತ್ತಾರೆ. ಆದರೆ ವಿದ್ಯುತ್ ಸ್ಥಗಿತವಾಗುತ್ತಿರುವ ಕಾರಣ ಕಗ್ಗತ್ತಲಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ವೃದ್ಧರು, ಮಕ್ಕಳು ಮತ್ತು ಮಹಿಳೆಯರು, ರಸ್ತೆಯಲ್ಲಿ ತಮ್ಮ ಹೊಗದ್ದೆಗಳಿಗೆ ಹೊಗಿಬರಲು ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ಹಾವು-ಚೇಳು ಸೇರಿದಂತೆ ಇತರೆ ಕ್ರಿಮಿಕಿಟಗಳಿಂದ ಜೀವಕ್ಕೆ ಅಪಾಯ ಉಂಟಾಗುವ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಕನಕಗಿರಿ ಭಾಗದ ಹಿರೇಖೇಡ, ಮಲ್ಲಿಗೆವಾಡ, ನಿರಲೂಟಿ, ಚಿಕ್ಕಖೇಡ, ಸಿರವಾರ, ಗೋಡಿನಾಳ, ಗುಡದೂರು, ಮಲ್ಲಾಪೂರ, ಉಮಳಿ ಕಾಟಾಪೂರ, ಕರಡೊಣಿ, ಆಕಳಕುಂಪಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಜೆಸ್ಕಾಂ ಅಧಿಕಾರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕನಕಗಿರಿ ತಾಲೂಕ ಘಟಕದ ಗೌರವ ಅಧ್ಯಕ್ಷ ಈಶಪ್ಪ, ಉಪಾಧ್ಯಕ್ಷ ವೆಂಕಟೇಶ ನಾಯಕ, ಹೋಬಳಿ ಘಟಕದ ಅಧ್ಯಕ್ಷರಾದ ಹನುಮಂತಪ್ಪ ಬಂಡ್ರಾಳ, ಹಿರೇಖೇಡ ಗ್ರಾ.ಪಂ ಸದಸ್ಯ ಭಾರಿಮರದಪ್ಪ, ಗುಡದೂರು ಗ್ರಾಮದ ರೈತರಾದ ಹುಸೇನಸಾಬ, ಮಂಜುನಾಥ ಸೇರಿದಂತೆ ಇತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*