ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಿಂದೂ ಅಮೆರಿಕನ್ನರ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅವರನ್ನು ತೀವ್ರಗಾಮಿ ಎಡಪಂಥೀಯರ ಧರ್ಮ ವಿರೋಧಿ ಕಾರ್ಯಸೂಚಿಯಿಂದ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಪಾಲುದಾರಿಕೆಯನ್ನು ಹೆಚ್ಚಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೋದಿ ಅವರನ್ನು ಮತ್ತೊಮ್ಮೆ ಉತ್ತಮ ಸ್ನೇಹಿತ ಎಂದು ಕರೆದಿದ್ದಾರೆ.
ತೀವ್ರಗಾಮಿ ಎಡಪಂಥೀಯರ ಧರ್ಮ ವಿರೋಧಿ ಕಾರ್ಯಸೂಚಿಯ ವಿರುದ್ಧ ನಾವು ಹಿಂದೂ ಅಮೆರಿಕನ್ನರನ್ನು ರಕ್ಷಿಸುತ್ತೇವೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತೇವೆ. ನನ್ನ ಆಡಳಿತದಲ್ಲಿ ನಾವು ಭಾರತ ಮತ್ತು ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿ ಅವರೊಂದಿಗಿನ ನಮ್ಮ ಉತ್ತಮ ಪಾಲುದಾರಿಕೆಯನ್ನು ಬಲಪಡಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಟ್ರಂಪ್ ಖಂಡಿಸಿದ್ದಾರೆ.
“ಬಾಂಗ್ಲಾದೇಶದಲ್ಲಿ ಜನಸಮೂಹಗಳಿಂದ ಹಲ್ಲೆಗೊಳಗಾಗುತ್ತಿರುವ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಅನಾಗರಿಕ ಹಿಂಸಾಚಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದಿದ್ದಾರೆ.

