ಶಿಕಾರಿಪುರ: ದಿನಾಂಕ ೨೯, ೩೦ - ೦೧ - ೨೦೨೫ ರಂದು ಸರ್ವೋದಯ ರಾಷ್ಟ್ರೀಯ ಸಮ್ಮೇಳನವನ್ನು ಸ್ವಾತಂತ್ರ್ಯ ಹೋರಾಟಗಾರರ ನೆಲೆಬೀಡು, ತ್ಯಾಗ, ಬಲಿದಾನಗಳ ಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ತಿಪಟೂರು ತಾಲೂಕು ಸರ್ವೋದಯ ಮಂಡಲದ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ಶೋಭಾ ಜಯದೇವ್ ರವರ ನೇತೃತ್ವದಲ್ಲಿ ಇಪ್ಪತ್ತು ಸರ್ವೋದಯ ಬಂಧುಗಳು ಭಾಗವಹಿಸಿದ್ದರು. ಅದರಲ್ಲೂ ಹದಿನಾಲ್ಕು ಮಹಿಳೆಯರೇ ಇದ್ದದ್ದು ವಿಶೇಷವಾಗಿತ್ತು.
ದಿನಾಂಕ ೨೯ ರಂದು ಮಧ್ಯಾಹ್ನ ಒಂದು ಗಂಟೆಗೆ ತಲುಪಿದ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ ತಂಡದವರಿಂದ ಹೃದಯಪೂರ್ವಕ ಸ್ವಾಗತ ಅವರೇ ವ್ಯವಸ್ಥೆ ಮಾಡಿದ ಸುಸಜ್ಜಿತ ಬಸ್ ನಲ್ಲಿ ಪ್ರಯಾಣಿಸಿ ಸಮೀಪದ ಕಲ್ಯಾಣ ಮಂಟಪದಲ್ಲಿ ಉತ್ತಮ ಭೋಜನ ಮಾಡಿ ಸಂಜೆ ಈಸೂರಿಗೆ ತಲುಪಿದೆವು.
ಇತ್ತೀಚೆಗೆ ನಿರ್ಮಾಣವಾಗಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಆಕರ್ಷಕವಾಗಿದೆ. ಹೋರಾಟದಲ್ಲಿ ಬಲಿದಾನಗೈದ ಬಿ. ಮಲ್ಲಪ್ಪ, ಸೂರ್ಯನಾರಾಯಣ, ಗುರಪ್ಪ, ಹಾಲಪ್ಪ, ಗೌಡರ ಶಂಕರಪ್ಪ ಇವರ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಲೋಕ ಸೇವಕರಿಗೆ ಈಸೂರಿನ ಸ್ವಾತಂತ್ರ ಹೋರಾಟದ ವಿವರವನ್ನು ಶ್ರೀ ಹೆಚ್.ಎಸ್. ಮಂಜಪ್ಪ ನೀಡಿದರು. ಸಂಜೆ ಗ್ರಾಮದ ಜಿ. ಎಸ್. ಶಿವರುದ್ರಪ್ಪ ಬಯಲು ರಂಗಮಂದಿರದಲ್ಲಿ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯಿಂದ ಪ್ರಭಾವಿತನಾಗಿ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ತುಕಾರಾಂ ಗೋಲೆಯವರ ಆತ್ಮಕಥೆ ಆಧಾರಿತ ನಾಟಕ ಪ್ರದರ್ಶನ ಔಚಿತ್ಯ ಪೂರ್ಣವಾಗಿತ್ತು. ಕಾಂತೇಶ ಕದರಮಂಡಲಗಿಯವರ ನಿರ್ಧೇಶನದಲ್ಲಿ ಹಲವಾರು ಇತಿಮಿತಿಗಳ ಮಧ್ಯೆಯೂ ಜನರಿಗೆ ಗಾಂಧಿ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು.
