
ಗಂಗಾವತಿ: ದೇಶದ ಬಹುತೇಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ವಾಹನಗಳು ಪಥ ಬಿಟ್ಟು ಸಂಚರಿಸುತ್ತಿರುವುದರಿಂದ ಅಫ಼ಘಾತಗಳು ಸಂಭವಿಸುತ್ತಿವೆ.ಇತ್ತೀಚಿಗೆ ಭಾರಿ ವಾಹನವೊಂದು ರಸ್ತೆಯ ಬಲ ಭಾಗದಲ್ಲಿ ಸಂಚರಿಸಿದ್ದರಿಂದ ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ವೋಲ್ವಾ ಕಾರ್ ಒಂದರ ಮೇಲೆ ಲಾರಿ ಮಗುಚಿಬಿದ್ದು ಆರು ಜನ ಮೃತರಾಗಿದ್ದು ವಿಷಾದಕರ ಸಂಗತಿಯಾಗಿದೆ.
ಲಾರಿ ಮತ್ತು ಕಾರು ಬೇರೆ ಬೇರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಅಫ಼ಘಾತ ಸಂಭವಿಸಲು ಲಾರಿಯು ರಸ್ತೆಯ ಎಡ ಭಾಗದಲ್ಲಿ ಸಂಚರಿಸುವ ಬದಲು, ಬಲ ಭಾಗದಲ್ಲಿ ಸಂಚರಿಸಿದ್ದೇ ಕಾರಣ.
ಲಾರಿ,ಬಸ್,ಟ್ರ್ಯಾಕ್ಟರ್,ಎತ್ತಿನ ಬಂಡಿ ಮುಂತಾದವುಗಳು ಹಿಂಬಾದಲ್ಲಿ ಯಾವುದೇ ರೇಡಿಯಮ್ ಸ್ಟಿಕ್ಕರ್ ಗಳನ್ನು ಅಳವಡಿಸಿ ಕೊಂಡಿರುವುದಿಲ್ಲ.ಬ್ರೆಕ್ ಲೈಟ್ ಹಾಗೂ ಇಂಡಿಕೇಟರ್ ಸಿಗ್ನಲ್ ಗಳು ಕೆಲಸ ನಿರ್ವಹಿಸುತ್ತಿರುವುದಿಲ್ಲ.ಎಲ್ಲಾ ರಸ್ತೆಗಳಲ್ಲಿಯೂ ಸಂಚರಿಸುವ ಉಸುಕು, ಬಿಂಚಿ ಕಲ್ಲುಗಳು, ಹೊತ್ತ ಲಾರಿ ಮತ್ತು ಟ್ರ್ಯಾಕ್ಟರ್ ಗಳು ಟ್ರಾಲಿಯ ಮೇಲೆ ಯಾವುದೇ ಹೊದಿಕೆಯನ್ನು ಹೊದ್ದಿರುವುದಿಲ್ಲ.ಇದರಿಂದ ಸಾಕಷ್ಟು ಸಣ್ಣ-ಪುಟ್ಟ ವಾಹನಗಳ ಮುಂದಿನ ಗ್ಲಾಸ್ ಗಳು ಒಡೆದ ಉದಾಹರಣೆಗಳು ಸಾಕಷ್ಟಿವೆ.
ಕಬ್ಬಿಣದ ರಾಡ್ ಹೊತ್ತ ಲಾರಿ,ಟ್ರ್ಯಾಕ್ಟರ್ ಗಳು ಮುಂಜಾಗ್ರತೆಯ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿವೆ,ಎತ್ತರದ ರಸ್ತೆಯಲ್ಲಿ ಇಂತಹ ವಾಹನಗಳು ಸಂಚರಿಸುವಾಗ ಹಿಂಬದಿಯ ವಾಹನಗಳ ಮೇಲೆ ಕಬ್ಬಿಣದ ವಸ್ತುಗಳು ನೇರವಾಗಿ ಹಿಂದೆ ಸಂಚರಿಸುವ ವಾಹನಗಳ ಮೇಲೆ ಬಿದ್ದು ,ಸಾವು-ನೋವುಗಳು ಸಂಭವಿಸಿದ ಘಟನೆಗಳು ಸಹ ವರದಿಯಾಗಿವೆ.(ಹಳೇ ಟಯರ್ ಅಥವಾ ರಬ್ಬರ್ ಪಟ್ಟಿಗಳನ್ನು ಕಟ್ಟಿಕೊಂಡು ಸಂಚರಿಸುವುದು ವಾಡಿಕೆ)
ಬೆಂಗಳೂರಿನ ರಾಜಾಜಿನಗರದ ಪ್ಲೈ ಓವರ್ ಮೇಲೆ ದಿನಾಂಕ:30-12-2024 ರಂದು ಸಾಯಂಕಾಲ 7 ಗಂಟೆಯ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ,ಕಬ್ಬಿಣದ ರಾಡ್ ಗಳನ್ನು ಹೊತ್ತ ಲಾರಿ ಸಂಚರಿಸುತ್ತಿರುವುದು ಕಂಡಿತು.ಇದೇ ರೀತಿ ಉಸುಕು,ಬೆಣಚಿ ಕಲ್ಲು ಹೊತ್ತ ಹಲವಾರು ಲಾರಿಗಳು, ಮೇಲೆ ಹೊದಿಕೆ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬಂತು.ರಸ್ತೆಯಲ್ಲಿನ ಸಿ.ಸಿ.ಕ್ಯಾಮೆರಾಗಳ ಮೂಲಕ ಇವುಗಳನ್ನು ಖಚಿತ ಪಡಿಸಿಕೊಳ್ಳಬಹುದು.
ಹೈವೇ ಪೆಟ್ರೊಲಿಂಗ್ ವಾಹನಗಳು ಮತ್ತು ಆರ್.ಟಿ.ಓ ಅಧಿಕಾರಿಗಳು ಇವೆಲ್ಲವುಗಳನ್ನು ಕಂಡು ಕಾಣದಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದಕರ.
ಅವೈಜ್ಞಾನಿಕವಾಗಿ ಬಾಡಿ ಕಟ್ಟಿಸಿ ಕೊಂಡು ಸಂಚರಿಸುವ ಭಾರಿ ಗಾತ್ರದ ವಾಹನಗಳನ್ನು ತಡೆಯಬೇಕು. ಬೆಂಗಳೂರಿನ ನೆಲಮಂಗಲ ಹೈವೇ ದಲ್ಲಿ ಇಂತಹ ಅವೈಜ್ಞಾನಿಕ ಬಾಡಿ ಕಟ್ಟಿಕೊಂಡ ಲಾರಿಯಿಂದಲೇ ಮೇಲೆ ತಿಳಿಸಿದ ಅಫ಼ಘಾತ ಸಂಭವಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹೈವೇ ಪೆಟ್ರೊಲಿಂಗ್ ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ವಾಹನಗಳ ಓಡಾಟ ತಡೆಯುವುದು ಅಗತ್ಯ.
ಈ ನಿಟ್ಟಿನಲ್ಲಿ ಮೇಲ್ಕಾಣಿಸಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ,ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿಕಟ ಪೂರ್ವ ನಿರ್ದೇಶಕ ಅಶೋಸ್ವಾಮಿ ಹೇರೂರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇಮೇಲ್ ಮೂಲಕ ಪತ್ರ ಬರೆದು ಒತ್ತಾಯಿಸಿದ್ದಾರೆ.
