ಮೈಕ್ರೋಫೈನಾನ್ಸ್ ಪ್ರತಿನಿಧಿಗಳು, ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಭೆ

ರಾಯಚೂರು: ಫೆ.01 (ಕರ್ನಾಟಕ ವಾರ್ತೆ): ಮೈಕ್ರೋಫೈನಾನ್ಸಗಳಿಂದ ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಎಚ್ಚರಿಕೆ ನೀಡಿದರು.
ಫೆ.01ರ ಶನಿವಾರ, ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಜಲ ನಿಮರ್ಲ ಸಭಾಂಗಣದಲ್ಲಿ ಮೈಕ್ರೋಫೈನಾನ್ಸ್ ಪ್ರತಿನಿಧಿಗಳು, ಬ್ಯಾಂಕಿನ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ವಸೂಲಿ ಮಾಡುವಾಗ ಆರ್‌ಬಿಐ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಬೇಕು. ಸಾಲ ವಸೂಲಾತಿ ವೇಳೆ ಆರ್‌ಬಿಐ ನಿಯಮದಂತೆ ನಡೆದುಕೊಳ್ಳಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಸಾಲ ನೀಡಬೇಡಿ ಅಥವಾ ಸಾಲಗಾರರಿಂದ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ, ಸಾಲ ವಸೂಲಿ ಮಾಡುವಾಗ ಜನರನ್ನು ಹಿಂಸಿಸಬಾರದು ಮತ್ತು ಕಿರುಕುಳ ನೀಡಬಾರದು ಎಂದು ತಿಳಿಸಿದರು.
ಕಿರುಕುಳ ನೀಡಿಬೇಡಿ: ರಾಯಚೂರ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಜನರಿಗೆ ಹಣದ ಅವಶ್ಯಕತೆ ಇರುತ್ತದೆ. ಅದನ್ನೇ ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಹೆಚ್ಚಿನ ಮಟ್ಟದಲ್ಲಿ ಹಣ ನೀಡಿ ಕಂಪನಿಗಳಿಂದ ಕಿರುಕುಳ ನೀಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸೌಜನ್ಯದಿಂದ ವರ್ತಿಸಬೇಕು; ಮೈಕ್ರೋ ಫೈನಾನ್ಸ್ ಹಾಗೂ ಸಾಲ ಪಡೆದವರ ನಡುವೆ ಯಾವುದಾದರೂ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಮೈಕ್ರೋ ಫೈನಾನ್ಸಗಳ ಅಮಾನುಷ ವರ್ತನೆಯ ಘಟನೆಗಳು ಗಮನಕ್ಕೆ ಬಂದ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸೌಜನ್ಯದಿಂದ ವರ್ತಿಸಿ:
ಮರುಪಾವತಿ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳದೆ ಸಾಲ ನೀಡುವುದು ತಪ್ಪಾಗುತ್ತದೆ. ಇದನ್ನರಿಯಬೇಕು. ಸಾಲ ನೀಡುವ ಸಂದರ್ಭದಲ್ಲಿ ಸಾಲ ಪಡೆಯುವವರಿಗೆ ಸಾಲ ಮರುಪಾವತಿಯ ಷರತ್ತು ವಿವರಿಸಬೇಕು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಡ್ಡಾಯ ಗುರುತಿನ ಚೀಟಿ ಧರಿಸಿ ಸಾಲ ವಸೂಲಾತಿಗೆ ತೆರಳಬೇಕು. ಸೌಜನ್ಯದಿಂದ ವರ್ತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
144 ಲೇವಾದೇವಿ, ಹಣಕಾಸು ಸಂಸ್ಥೆಗಳು: ಜಿಲ್ಲೆಯಲ್ಲಿ 52 ಲೇವಾದೇವಿಗಾರರು, 33 ಗಿರವಿದಾರರು 59 ಹಣಕಾಸು ಸಂಸ್ಥೆಗಳು ಸೇರಿದಂತೆ ಒಟ್ಟು 144 ಲೇವಾದೇವಿಗಾರರು, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳಿವೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸಸ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಲೀಡ್ ಬ್ಯಾಂಕ್ ಮ್ಯಾನೇಜರ್ ಟಿ.ತಿರುಮಲೇಶ್, ಸಹಕಾರ ಸಂಘಗಳ ಉಪ ನಿಬಂಧಕರಾದ ಮನೋಹರ ಸೇರಿದಂತೆ ಇತರರು ಇದ್ದರು.
