ಹುನಗುಂದ: 'ಕಾಂತರಾಜ್ ಅವರು ನೀಡಿರುವ ಜಾತಿಗಣತಿ ವರದಿಯಲ್ಲಿನ ಅಂಕಿ ಅಂಶಗಳು ವಾಸ್ತವಿಕತೆಯಿಂದ ಕೂಡಿಲ್ಲ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು' ಎಂದು ಅರಕಲಗೂಡು ತಾಲ್ಲೂಕಿನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು. ಪಟ್ಟಣದ ಭಕ್ತರೊಬ್ಬರ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ರಾಜ್ಯದಲ್ಲಿ ವಿಶ್ವಕರ್ಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇತ್ತೀಚಿನ ಜಾತಿ ಗಣತಿ ವರದಿಯಲ್ಲಿ ಕೇವಲ 6.86 ಲಕ್ಷ ಎಂದು ಹೇಳಲಾಗಿದೆ. ಆದರೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಅಂದಾಜು 15 ಸಾವಿರ ಜನ ವಿಶ್ವಕರ್ಮ ಸಮುದಾಯವಿದ್ದಾರೆ. ಕಡಿಮೆ ಎಂದರರೂ 15 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. 10 ವರ್ಷಗಳ ಹಿಂದೆ ಮಾಡಿದ ಜಾತಿ ಗಣತಿಯಲ್ಲಿನ ಅಂಕಿ ಅಂಶಗಳು ದೋಷ ಗಳಿಂದ ಕೂಡಿವೆ. ಗ್ರಾಮೀಣ ಮತ್ತು ದೊಡ್ಡ ನಗರ ಪ್ರದೇಶಗಳಲ್ಲಿನ ಜನರನ್ನು ಸರಿಯಾಗಿ ಗಣತಿ ಮಾಡಿಲ್ಲ. ಈಗಿನ ಜಾತಿಗಣತಿ ವರದಿಯನ್ನು ನಾವು ಒಪ್ಪುವುದಿಲ್ಲ. ಒಂದು ವೇಳೆ ಈ ವರದಿಯನ್ನು ಮುಂದುವರೆಸಿದಲ್ಲಿ ಸಮಾಜದ ಸಂತರು, ಸ್ವಾಮೀಜಿಗಳು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು' ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಗುರುಪ್ಪಯ್ಯ ಸ್ವಾಮೀಜಿ, ವಿಶ್ವನಾಥ ಗಲಗಲಿ, ಭಾಸ್ಕರ ಮಾಡಬಾಳ ಇದ್ದರು.

