ತುಮಕೂರು: ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ಏಪ್ರಿಲ್ 29 ಹಾಗೂ 30ರಂದು ಆಯೋಜಿಸಿರುವ ಅನುಭವ ಮಂಟಪ – ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ವಿಶ್ವ ಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ತಿಳಿಸುವ ನಿಟ್ಟಿನಲ್ಲಿ ಏಪ್ರಿಲ್ 17 ರಿಂದ 29ರವರೆಗೆ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸಲಿದೆ.
ಈ ರಥಯಾತ್ರೆಯು ಏಪ್ರಿಲ್ 19ರಂದು ಮಧ್ಯಾಹ್ನ 1:30 ಗಂಟೆಗೆ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ಆಗಮಿಸಲಿದ್ದು, ರಥಯಾತ್ರೆಯನ್ನು ಜಿಲ್ಲಾಡಳಿತದಿಂದ ಗೌರವಯುತವಾಗಿ ಸ್ವಾಗತಿಸಿ ಬೀಳ್ಕೊಡಲಾಗುವುದು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಪರಿಷತ್ತು, ಸರ್ಕಾರಿ ಅಧಿಕಾರಿ/ನೌಕರರು, ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಜಿಲ್ಲೆಯ ವಿವಿಧ ಸಮುದಾಯದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ತಿಳಿಸಿದ್ದಾರೆ.

