ಪ್ರಕೃತಿಯ ಸೌಂದರ್ಯದ ಮುಂದೆ ಮಂಡಿಯೂರಿದ ಭಯೋತ್ಪಾದನೆ: ಪಹಲ್ಗಾಮ್ ಗೆ ಮತ್ತೆ ಆಗಮಿಸುತ್ತಿದ್ದಾರೆ ಪ್ರವಾಸಿಗರು

ಭಾಸ್ಕರ ಪತ್ರಿಕೆ
0

ಶ್ರೀನಗರ: ಭೂಮಿ ಮೇಲಿನ ಸ್ವರ್ಗ ಪಹಲ್ಗಾಮ್ ಒಂದು ವಾರದ ಹಿಂದೆ ಅಕ್ಷರಶಃ ನರಕವಾಗಿತ್ತು. ಭಯೋತ್ಪಾದಕ ದಾಳಿಗೆ 26 ಮಂದಿ ಉಸಿರು ಚೆಲ್ಲಿದ್ದರು. ಈ ಘಟನೆಯ ನಂತರ ಪ್ರವಾಸಿಗರು ಈ ಸ್ಥಳಕ್ಕೆ ಹೋಗಲು ಭಯಭೀತರಾಗಿದ್ದರು. ಆದರೆ ಇದೀಗ ಸುಂದರ ಪ್ರಕೃತಿಯ ಸೌಂದರ್ಯದ ಮುಂದೆ ಭಯೋತ್ಪಾದನೆ ಸೋತು ಮಂಡಿಯೂರಿದ್ದು, ಪ್ರವಾಸಿಗರು ಮತ್ತೆ ಪಹಲ್ಗಾಮ್ ನ ಸ್ವರ್ಗಕ್ಕೆ ಆಗಮಿಸಲು ಆರಂಭಿಸಿದ್ದಾರೆ.

ಸಾಕಷ್ಟು ಜನರು ಈ ಭೀಕರ ದಾಳಿಯಿಂದ ಭಯಭೀತರಾಗಿದ್ದರೂ ಸಹ, ಹಲವು ಪ್ರವಾಸಿಗರು ಪೆಹಲ್ಗಾಮ್ ಗೆ ತೆರಳಿ, ಇಲ್ಲಿಗೆ ಬನ್ನಿ, ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳುತ್ತಾ, ಪ್ರವಾಸಿಗರಿಗೆ ಧೈರ್ಯ ತುಂಬಿದ್ದಾರೆ.

ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅದಕ್ಕೆ ಮುಖ್ಯ ಕಾರಣ, ಪ್ರವಾಸಿಗರಿಗೆ ಇಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಅನುಮಾನ ಮೂಡಿದೆ. ತಮ್ಮ ಸುರಕ್ಷತೆಯನ್ನು ಅವರು ಬಯಸುತ್ತಿದ್ದಾರೆ. ಪಹಲ್ಗಾಮ್ ನಂತಹ ಪ್ರವಾಸಿ ತಾಣಕ್ಕೆ ಈ ಘಟನೆಯ ಬಳಿಕವಾದರೂ ಕೇಂದ್ರ ಸರ್ಕಾರ ಭದ್ರತೆಗೆ ಹೆಚ್ಚು ಒತ್ತು ನೀಡಿದರೆ, ಮತ್ತೆ ಹಿಂದಿನಂತೆ ಪ್ರವಾಸಿಗರು ಈ ಸ್ಥಳಕ್ಕೆ ಹರಿದು ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಗುಜರಾತ್​ ನ ಸೂರತ್​ ನಿವಾಸಿ ಮೊಹಮ್ಮದ್ ಅನಸ್ ಎಂಬವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ,  ಚಿಂತಿಸಲು ಏನೂ ಇಲ್ಲ, ಪಹಲ್ಗಾಮ್ ಹಿಂದಿನಂತೆಯೇ ಇದೆ. ಸೈನ್ಯ ಮತ್ತು ಸರ್ಕಾರ ಹಾಗೂ ಇಲ್ಲಿನ ಸ್ಥಳೀಯರು ನಮ್ಮೊಂದಿಗಿದ್ದಾರೆ ಎಂದು ಸುರಕ್ಷತೆಯನ್ನು ಖಾತರಿಪಡಿಸಿದ್ದಾರೆ.

ಪಹಲ್ಗಾಮ್ ಒಂದು ಅತೀ ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಡದಂತೆ ತಡೆಯುವುದು ಉಗ್ರರ ಮುಖ್ಯ ಉದ್ದೇಶವಾಗಿದ್ದರೆ, ಅದನ್ನು ಭಾರತೀಯರು ತಡೆಗಟ್ಟಬೇಕು. ನಮ್ಮ ದೇಶದಲ್ಲಿ ಓಡಾಡಲು ಉಗ್ರರ ಅನುಮತಿ ಬೇಕೆ? ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗಳ ಅಭಿಪ್ರಾಯವಾಗಿದೆ. ಗುಂಡಿನ ಮೊರೆತ, ಸಾವಿನ ಆರ್ತನಾದ, ಹೆಂಗಸರ, ಮಕ್ಕಳ ಚೀರಾಟ, ರಕ್ತದೋಕುಳಿ, ಭೀತಿಯ ಸಾಗರವಾಗಿದ್ದ ಪಹಲ್ಗಾಮ್ ಇವೆಲ್ಲವನ್ನೂ ಮೆಟ್ಟಿನಿಂತು ಮತ್ತೆ ಮಕ್ಕಳ ನಗು, ನವ ಜೋಡಿಗಳ ಕಲರವ, ಪ್ರವಾಸಿಗರ ಆನಂದ ಹರಿಯುವಂತಾಗಬೇಕು ಎನ್ನುವುದು ಪಹಲ್ಗಾಮ್ ನಿವಾಸಿಗಳ ಆಶಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*