ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಾವತಿ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ, 3 ಲಕ್ಷ ರೂ. ದಂಡ

ಭಾಸ್ಕರ ಪತ್ರಿಕೆ
0

ತುಮಕೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಗರ್ಭಾವತಿಯಾಗಲು ಕಾರಣನಾಗಿದ್ದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ POCSO ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ಈ ಪ್ರಕರಣ ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಜಬೀವುಲ್ಲಾ(42) ಎಂಬಾತ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಅಣ್ಣ, ತಂದೆ, ತಾಯಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ.

ಆರೋಪಿಗೆ ಇಬ್ಬರು ಮಕ್ಕಳಿದ್ದರೂ ಅಪ್ರಾಪ್ತ ಬಾಲಕಿಯ ಮೇಲೆ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ನೊಂದ ಬಾಲಕಿಯ ತಾಯಿ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತುರುವೇಕೆರೆ ಸಿಪಿಐ ಗೋಪಾಲ ನಾಯ್ಕ ಅವರು ಈ ಪ್ರಕರಣದ ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತುರುವೇಕೆರೆ ಸಿಪಿಐ ಲೋಹಿತ್ ಬಿ.ಎನ್. ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಿಗಳು ಮತ್ತು ದಾಖಲೆಗಳಿಂದ ಆರೋಪಿ ಜಬೀವುಲ್ಲಾನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 10 ಲಕ್ಷ ರೂ. ಹಾಗೂ  ದಂಡದ ಮೊತ್ತದಿಂದ 3 ಲಕ್ಷ ರೂ. ಸೇರಿ ಒಟ್ಟು 13 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಅಭಿಯೋಜನೆಯ ಪರವಾಗಿ ತುಮಕೂರು ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*