ಹಾಸನ / ತಿಪಟೂರು: ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೇ ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ “ಪ್ರತಿಭಾ ಕಲರವ”ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಎಲೆಮರೆಕಾಯಿಯಂತಹ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ತಿಪಟೂರು ತಾಲ್ಲೂಕು ಘಟಕ ಅಧ್ಯಕ್ಷರಾದ ಲತಾಮಣಿಯವರ ಕ್ರಿಯಾಶೀಲತೆಯಿಂದ ವಚನ ಗಾಯನ, ವಚನ ನೃತ್ಯ, ಕಾವ್ಯ ಕಲರವ, ಆರೋಗ್ಯ ಜಾಗೃತಿ, ಶೈಕ್ಷಣಿಕ ಕಾರ್ಯಾಗಾರ, ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ಉತ್ತಮೋತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರತಿಭಾ ಕಲರವ ಶಿಬಿರ ಚಿಣ್ಣರಿಗೆ ವರದಾನವಾಗಿದೆ. ಸ್ಥಳೀಯ ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ಬೆನ್ನು ತಟ್ಟುವ ಕಾರ್ಯವನ್ನು ಇಲ್ಲಿನ ಮಾಧ್ಯಮ ಬಂಧುಗಳು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ವೇದಿಕೆ ಅವರಿಗೆಲ್ಲಾ ಋಣಿಯಾಗಿರುತ್ತದೆ ಎಂದರು.
ತಿಪಟೂರು ಘಟಕದ ತಾಲ್ಲೂಕು ಅಧ್ಯಕ್ಷರಾದ ಲತಾಮಣಿ ಎಂ. ಕೆ. ತುರುವೇಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಸಮಿತಿಯ ಸಲಹೆ ಹಾಗೂ ನಿರ್ದೇಶನದಂತೆ ಎರಡು ದಿನಗಳ ಕಾಲ ಮಕ್ಕಳಿಗೆ ಯೋಗ, ಧ್ಯಾನ, ವ್ಯಾಯಾಮ, ಚಿತ್ರಕಲೆ, ಕ್ರೀಡೆ, ನಾಟಕಾಭಿನಯ, ಕರಕುಶಲ, ದೇಶಭಕ್ತಿ ಗೀತೆ, ಭಾವಗೀತೆ, ವಚನ ಗಾಯನ, ಭಾಷಾ ಕೌಶಲ, ಬರಹ ಕೌಶಲ, ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ಹೊರ ಸಂಚಾರ ಹೀಗೆ ಅನೇಕ ಮೌಲಿಕ ಅಂಶಗಳನ್ನು ಕಲಿಸಿಕೊಡಲಾಗಿದೆ. ಸ್ಥಳೀಯವಾಗಿ ಭಾಸ್ಕರ್ ಸರ್ ಹಾಗೂ ಸುಭೇದರ್ ಚಂದ್ರಶೇಖರಪ್ಪರವರ ಸಹಕಾರದಲ್ಲಿ ಮತ್ತು ಪತ್ರಿಕಾ ಮಾಧ್ಯಮದವರ ಸಹಕಾರದೊಂದಿಗೆ ಅನೇಕ ಮೌಲ್ಯಯುತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಹೋದರಿಯರಾದ ಗಿರಿಜಾ ನಿರ್ವಾಣಿ ಹಾಗೂ ಹಸೀನಾ ಎಚ್. ಕೆ. ರವರುಗಳು ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿ ನಮ್ಮ ಮಕ್ಕಳಿಗೆ ಎರಡು ದಿನಗಳ ಕಾಲ ಉತ್ತಮೋತ್ತಮ ಚಟವಟಿಕೆಗಳನ್ನು ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಭಾಸ್ಕರ್ ಪತ್ರಿಕೆಯ ಸಂಪಾದಕ ಡಾ. ಭಾಸ್ಕರ್ ಮುಖ್ಯ ಅತಿಥಿಯಾಗಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಮ್ಮ ತಾಲ್ಲೂಕಿನಲ್ಲಿ ಉದ್ಘಾಟನೆಗೊಂಡಾಗಿನಿAದಲೂ ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವೇದಿಕೆಯ ಜೊತೆ ನಾವು ಸದಾ ಇರುತ್ತೇವೆ. ಮುಂದಿನ ದಿನಗಳಲ್ಲಿ ಒಳ್ಳೊಳ್ಳೆಯ ಸತ್ಕಾರ್ಯಗಳನ್ನು ವೇದಿಕೆ ಮಾಡುತ್ತಾ ಸಾಗಲಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಭಾಸ್ಕರ್ ಟಿವಿಯ ವರದಿಗಾರ್ತಿ ಶುಭಾ ವಿಶ್ವಕರ್ಮ ಭಾಸ್ಕರ್ ಪತ್ರಿಕೆಯ ವತಿಯಿಂದ ಶಿಬಿರದ ಎಲ್ಲಾ ಮಕ್ಕಳಿಗೂ ಲೇಖನಿ ಹಾಗೂ ಸಿಹಿ ವಿತರಣೆ ಮಾಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹಾಸನದ ಸಾಹಿತಿ, ಯೋಗಶಿಕ್ಷಕಿ ಗಿರಿಜಾ ನಿರ್ವಾಣಿಯವರನ್ನು ಹಾಗೂ ಬೆಂಗಳೂರಿನ ಬಸವ ಟಿವಿ ಪ್ರವಚನಕಾರ್ತಿಯಾದ ಡಾ. ಎಚ್. ಕೆ. ಹಸೀನಾ ರವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೂ ಪ್ರಮಾನ ಪತ್ರಗಳನ್ನು ವಿತರಿಸಲಾಯಿತು. ಈ ಮಾಧ್ಯಮ ವರದಿಗಾರ ಮಂಜುನಾಥ, ಶುಭಾ ವಿಶ್ವಕರ್ಮ ಸೇರಿದಂತೆ ಪೋಷಕರು ಹಾಜರಿದ್ದರು.
ಕುಸುಮ ಕೆ.ಜೆ. ಕಾರ್ಯಕ್ರಮ ನಿರ್ವಹಸಿಸಿದರು. ಕುಮಾರಿ ತೇಜಶ್ರೀ ಎಸ್. ನಂದ ನಿರೂಪಿಸಿದರು, ಕುಮಾರಿ ಧನ್ಯತಾ ಎಂ. ಎಲ್. ಪ್ರಾರ್ಥಿಸಿದರು, ಹಿತಸ್ಮೃತಿ ಬಿ. ರಾಜ್ ವಂದಿಸಿದರು



