ಚಾರ್ಮಾಡಿ ಘಾಟ್ ಅಗಲೀಕರಣಕ್ಕೆ ಕ್ಷಣಗಣನೆ: ಸರಿ ಇರುವ ತಡೆಗೋಡೆಗಳಿಗೂ ಏಟು, ಸರ್ಕಾರದ ಹಣ ಪೋಲು

ಭಾಸ್ಕರ ಪತ್ರಿಕೆ
0

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆ(ಅಗಲೀಕರಣ) ಮಾಡಲು ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಕ್ಷಣಗಣನೆ  ಆರಂಭವಾಗಿದೆ. ಆದರೆ ಶಿಥಿಲಗೊಂಡ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಅದರ ಜೊತೆಗೆ ಹಳೆಯ ಗುಣಮಟ್ಟದ ದಪ್ಪದ ತಡೆಗೋಡೆಗಳನ್ನು ಜೆಸಿಬಿಯಿಂದ ಒಡೆದು ಹಾಕುವ ಮೂಲಕ ಅವೈಜ್ಞಾನಿಕ ತಡೆಗೋಡೆಗಳ ಕಾಮಗಾರಿ ನಡೆಯುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಾಟಿಯ ಹಲವು ಕಡೆ ತಡೆಗೋಡೆ ಶಿಥಿಲವಾಗಿದ್ದುದರಿಂದ ಅವುಗಳ ಕಾಮಗಾರಿ ಸುಮಾರು ಸಮಯದಿಂದ ನಡೆಸಲಾಗುತ್ತಿದೆ. ಆದರೆ ಅದರ ಜೊತೆಗೆ ಸರಿಯಿದ್ದ ಗುಣಮಟ್ಟದ ತಡೆಗೋಡೆ ಜೆಸಿಬಿಯಿಂದ ದೂಡಿ ಹಾಕುವ ಮೂಲಕ ಸರ್ಕಾರಿ ಹಣ ಪೋಲಾಗುತ್ತಿದೆ. ಚಾರ್ಮಾಡಿ ಘಾಟ್ ವಿಸ್ತರಣೆಯಾಗುವುದರಿಂದ ಮತ್ತೊಮ್ಮೆ ತಡೆಗೋಡೆ ಮಾಡಬೇಕಾಗುತ್ತದೆ. ಆದರೆ ಎರಡು ಕಾಮಗಾರಿ ನಡೆಯಲಿರುವುದರಿಂದ ಈಗ ಹೊಸ  ತಡೆಗೋಡೆ ನಿರ್ಮಿಸಿದರೆ ಸರ್ಕಾರಿ ಹಣ ದುರುಪಯೋಗವಾಗುತ್ತದೆ.

ರಸ್ತೆ ವಿಸ್ತರಣೆ ಮಾಡಿ ಆದ ಮೇಲೆಯೇ ತಡೆಗೋಡೆ ನಿರ್ಮಿಸಿದರೆ ಸರ್ಕಾರಕ್ಕೆ ಹಣ ಉಳಿಯುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.  ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ಸುಮಾರು 343 ಕೋಟಿ ಬಿಡುಗಡೆಯಾಗಿದೆ.ಆದರೆ ರಸ್ತೆ ವಿಸ್ತರಣೆ ಇರುವಾಗ ತಡೆಗೋಡೆ ಕಾಮಗಾರಿ ಆರಂಭಿಸಿರುವ ಗುತ್ತಿಗೆದಾರರು ಸರಿಯಿದ್ದ ತಡೆಗೋಡೆ ಒಡೆದು ತೆಗೆದು ಅವೈಜ್ಞಾನಿಕ ತಡೆಗೋಡೆ ನಿರ್ಮಿಸುತ್ತಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

 


ಪ್ರಾಣಿ ಸಂಕುಲಕ್ಕೆ ತೊಂದರೆ:  

ಚಾರ್ಮಾಡಿ ಘಾಟಿಯಲ್ಲಿ ಗುಣಮಟ್ಟದ ಗೋಡೆ ಪ್ರಪಾತಕ್ಕೆ ದೂಡಿ ಹಾಕುವ  ಮೂಲಕ ಪ್ರಾಣಿ ಸಂಕುಲಕ್ಕೂ ತೊಂದರೆಯಾಗಿ ಕುರುಚಲು ಗಿಡ ಹಸಿರ ಸಿರಿಗೆ ಹೊಡೆತ ಬಿದ್ದಂತಾಗಿದೆ. ಇನ್ನು ದೊಡ್ಡ ದೊಡ್ಡ ತಡೆಗೋಡೆಗಳ ತುಂಡು ಪ್ರಫಾತಕ್ಕೆ ದೂಡುವ ಮೂಲಕ ಪ್ರಪಾತದ ಮಣ್ಣು ಕುಸಿತವಾಗಿ ಸವಕಳಿ ಉಂಟಾಗಿ  ಅರಣ್ಯ ನಾಶ ಹಾಗೂ ಮಣ್ಣು ಕುಸಿತಕ್ಕೂ ಕಾರಣವಾಗಿದೆ.   ‘ ಚಾರ್ಮಾಡಿ ಘಾಟ್ ನಲ್ಲಿ ವಿಸ್ತರಣೆ ಕಾಮಗಾರಿ ಆದ ಮೇಲೆಯೇ ತಡೆಗೋಡೆ ಕಾಮಗಾರಿ ನಡೆಸುವುದು ಸೂಕ್ತ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು.  

–ಸಂಜಯ್ ಗೌಡ,ಸಾಮಾಜಿಕ ಕಾರ್ಯಕರ್ತ, ಕೊಟ್ಟಿಗೆಹಾರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*