ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ತನಿಖೆಗೆ ಉಭಯ ಸಚಿವರಿಂದ ಒತ್ತಾಯ

ಭಾಸ್ಕರ ಪತ್ರಿಕೆ
0

ಬೀದರ್: ದುರಾಡಳಿತದ ಫಲವಾಗಿ ಕಾರ್ಮಿಕರ ವೇತನ ಹಾಗೂ ವಿವಿಧ ಬ್ಯಾಂಕ್‌ ಗಳ ಸುಮಾರು 430 ಕೋಟಿ ರೂ. ಗೂ ಅಧಿಕ ಬಾಕಿ ಉಳಿಸಿಕೊಂಡು ಪ್ರಸ್ತುತ ಸ್ಥಗಿತಗೊಂಡಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಸಚಿವರಾದ ಈಶ್ವರ್ ಖಂಡ್ರೆ ಮತ್ತು ರಹೀಮ್ ಖಾನ್ ಅವರು ಒತ್ತಾಯಿಸಿದ್ದಾರೆ.

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ನಡೆದ ಹಳ್ಳಿಖೇಡ್‌ ನ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಮತ್ತು ಕಾರ್ಖಾನೆಯು ವಿವಿಧ ಸಹಕಾರಿ ಬ್ಯಾಂಕ್ ನಿಂದ ಪಡೆದಿರುವ ಸಾಲದ ಮರುಪಾವತಿ ಕುರಿತ ಸಭೆಯಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಈ ಹಿಂದೆಯೂ ಬಿ ಎಸ್‌ ಎಸ್ ಕೆ ನಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ಆಗಿದೆ. ಆದರೆ ತಾರ್ಕಿಕ ಅಂತ್ಯ ಕಂಡಿಲ್ಲ. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ದಂಡನೆ ಆಗಬೇಕು ಎಂದು ಆಗ್ರಹಿಸಿದರು

ಕಾರ್ಖಾನೆಯು ಡಿಸಿಸಿ ಬ್ಯಾಂಕ್ ನಿಂದ 115 ಕೋಟಿ ರೂ. ಸಾಲ ಪಡೆದಿದೆ. ಬಡ್ಡಿ ಸೇರಿ 233 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಕಾರ್ಖಾನೆ ಮತ್ತು ಡಿಸಿಸಿ ಬ್ಯಾಂಕ್ ಎರಡೂ ರೈತರದ್ದೇ ಆಗಿದೆ. ಬೆಟ್ಟದಷ್ಟು ಸಾಲದ ಹೊರೆ ಇದ್ದು ಸಕ್ಕರೆ ಕಾರ್ಖಾನೆಯೂ ಮುಚ್ಚಿದೆ. ಬ್ಯಾಂಕ್ ಕೂಡ ಚೇತರಿಸಿಕೊಳ್ಳದಂತಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಬೇಕು ಎಂದು ಅವರು ಸಲಹೆ ನೀಡಿದರು.

ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಮಾಡಿದವರ ವಿರುದ್ಧ ಕ್ರಮ ಆಗದಿದ್ದರೆ ಮತ್ತೆ ಅವರೇ ಚುನಾಯಿಸಿ ಬಂದು ಕಾರ್ಖಾನೆಯನ್ನು ನಾಶ ಮಾಡುತ್ತಾರೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯ ಸ್ವಾಧೀನದಲ್ಲಿರುವ 173 ಎಕರೆ ಜಮೀನಿನ ಪೈಕಿ, ಕಾರ್ಖಾನೆಗೆ ಬೇಕಾದಷ್ಟು ಜಾಗ ಇಟ್ಟುಕೊಂಡು ಭಾಗಶಃ ಮಾರಾಟ ಮಾಡಿ, ಬ್ಯಾಂಕ್ ಸಾಲ ತೀರಿಸಿ, ಯಂತ್ರೋಪಕರಣಗಳಿಗೆ ಹೊಸ ಸಾಲ ಪಡೆದು ಕಾರ್ಖಾನೆ ಆರಂಭಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಸಹಕಾರ ಸಚಿವ ರಾಜಣ್ಣ ಅವರು ಸಲಹೆ ನೀಡಿದರು.

ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಮತ್ತು ಕಾರ್ಖಾನೆಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್,ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್, ಎಂ.ಜಿ.ಮುಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ್ ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*