ಪ್ರತಿಯೊಂದು ಮಗುವು ಒಂದೊಂದು ಗಿಡವನ್ನು ಬೆಳೆಸುವ ಛಲವನ್ನೊಂದಿದರೆ ಸಾಕು ನಮ್ಮ ಪರಿಸರ ಪರಿಶುದ್ಧವಾಗುತ್ತದೆ : ತಿಪಟೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಆರ್. ಗುರುಸ್ವಾಮಿ
ಹಾಸನ /ತಿಪಟೂರು: ಭೂ ತಾಯಿಯ ಗರ್ಭದಲ್ಲಿ ಜನಿಸಿದ ಕೊನೆಯ ಸಂತತಿಯೇ ಮನುಷ್ಯ ಸಂಕುಲ, ಆದ್ದರಿಂದ ಭೂದೇವಿಗೆ ತನ್ನ ಕಿರಿಯ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ, ಮನುಷ್ಯ ಭೂಮಿಯನ್ನು ಎಷ್ಟೇ ಮಾಲಿನ್ಯ ಮಾಡಿದರೂ ಭೂತಾಯಿ ಮಾತ್ರ ಮನುಷ್ಯನನ್ನು ಮಮತೆಯಿಂದ ಇನ್ನೂ ಪೊರೆಯುತ್ತಿದ್ದಾಳೆ ಎಂದು ತಿಪಟೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಆರ್. ಗುರುಸ್ವಾಮಿ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾದ ಮಕ್ಕಳಿಂದಲೇ ನಮ್ಮ ಪರಿಸರ ಸಂರಕ್ಷಣೆಯಾಗಬೇಕಿದೆ, ಮಕ್ಕಳು ಮನಸ್ಸು ಮಾಡಿದರೆ ಮಾತ್ರ ಮಾಲಿನ್ಯವನ್ನು ತಡೆಗಟ್ಟಿ ನಿರ್ಮಲವಾದ ವಾತಾವರಣವನ್ನು ಸೃಷ್ಟಿಸಬಹುದಾಗಿದೆ, ಪ್ರತಿಯೊಂದು ಮಗುವು ಒಂದೊಂದು ಗಿಡವನ್ನು ಬೆಳೆಸುವ ಛಲವನ್ನೊಂದಿದರೆ ಸಾಕು ನಮ್ಮ ಪರಿಸರ ಪರಿಶುದ್ಧವಾಗುತ್ತದೆ ಎಂದು ಹೇಳಿ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಲತಾಮಣಿ ಎಂ. ಕೆ. ತುರುವೇಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮರವನ್ನು ಬಗ್ಗಿಸುವ ಬದಲು ಗಿಡವನ್ನೇ ಬಗ್ಗಿಸುವ ಎಂದು ಹೇಳುತ್ತಾ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದರೆ ಮಕ್ಕಳ ಮಾತಿನಂತೆ ಪೋಷಕರೂ ಕೂಡ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗುತ್ತಾರೆ. ಶಿಶು ಕೇಂದ್ರಿತ ಶಿಕ್ಷಣದಂತೆ ಇಂದಿನ ಸಮಾಜದಲ್ಲಿ ಶಿಶು ಕೇಂದ್ರಿತ ಕುಟುಂಬಗಳೇ ಹೆಚ್ಚಾಗಿವೆ ಆದ್ದರಿಂದ ನಾವು ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ, ಫಲವನ್ನು ದೊಡ್ಡವರಿಂದ ನಿರೀಕ್ಷಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯರಾದ ಶ್ರೀ ಶಂಕರಲಿಂಗಪ್ಪನವರು ಮಾತನಾಡಿ ನಾವೆಲ್ಲರೂ ಇಂದು ಅನುಭವಿಸುತ್ತಿರುವ ಪರಿಸರವು ನಮ್ಮ ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಬೇಕು ಎಂದರು.
ನಮ್ಮೆಲ್ಲರಿಗೂ ಉಸಿರನಿತ್ತ ಹಸಿರಿನ ದಿನದ ಸಂಭ್ರಮಾಚರಣೆಯಲ್ಲಿ ತಾಯ ಬಸಿರಿನಿಂದ ಉಸಿರನ್ನು ಹೊತ್ತು ಭುವಿಗೆ ಬಂದ ದಿನವೆಂದು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡ ಪತ್ರಕರ್ತ ಭಾಸ್ಕರಾಚಾರ್ ರವರು ಕಾರ್ಯಕ್ರಮದಲ್ಲಿ ನೆರೆದಿದ್ದ ಮಕ್ಕಳಿಗೆ ಸಿಹಿ ಮತ್ತು ಪೆನ್ಸಿಲ್ ಉಡುಗೊರೆಯನ್ನು ನೀಡಿ ಸಂಭ್ರಮಿಸಿದರು.
ಭಾಸ್ಕರಾಚಾರ್ ಅವರ ಹುಟ್ಟುಹಬ್ಬದ ನಿಮಿತ್ತ ಪತ್ರಕರ್ತರಾದ ನವೀನ್ ರವರು ಕೇರಾ ಸಂಘದ ವತಿಯಿಂದ ಹೂ ಗಿಡವನ್ನು ಹಾಗೂ ಉಷಾರಾಣಿಯವರು ತಾವೇ ಚಿತ್ರಿಸಿದ ಭಾಸ್ಕರಾಚಾರ್ ರವರ ಭಾವಚಿತ್ರ ಚೌಕಟ್ಟನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಸವರಾಜ್ ಪತ್ರಕರ್ತರು, ಸುಭೇದರ್ ಚಂದ್ರಶೇಖರಪ್ಪನವರು ಮತ್ತು ಧರಣೇಶ್ ಪತ್ರಿಕಾ ಮಾಧ್ಯಮದವರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು.
ಕಾರ್ಯಕ್ರಮದಲ್ಲಿ ಭಾಸ್ಕರ್ ಟಿವಿಯ ವರದಿಗಾರ್ತಿ ಶುಭಾ ವಿಶ್ವಕರ್ಮರವರು ಎಲ್ಲರನ್ನೂ ಸ್ವಾಗತಿಸಿದರು, ವೇದಿಕೆಯ ಸಹ ಕಾರ್ಯದರ್ಶಿ ಕುಮಾರಿ ಕುಸುಮ ಕೆ. ಜೆ. ತುರುವೇಕೆರೆ ಪ್ರಾರ್ಥಿಸಿದರು, ಕಾರ್ಯದರ್ಶಿ ಶಿಲ್ಪಾ ಎನ್. ನಿರೂಪಿಸಿದರು ಹಾಗೂ ರಂಜಿತಾ ಆನಂದ್ ರವರು ವಂದಿಸಿದರು.
