ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!

ಭಾಸ್ಕರ ಪತ್ರಿಕೆ
0

ತುರುವೇಕೆರೆ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತುರುವೇಕೆರೆ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಕರಣ ನಡೆದು 4 ತಿಂಗಳ ಬಳಿಕ ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದ್ದು, ಅಕ್ರಮ ಸಂಬಂಧ ಹೊಂದಿದ್ದ 53 ವರ್ಷದ ಪ್ರಿಯಕರನೇ ಈ ಭೀಕರ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಕಳೆದ ಜನವರಿ 30ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಂಚೆಹಳ್ಳಿ ಅರಣ್ಯ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಹಂತಕರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮುಖ ಮತ್ತು ದೇಹವನ್ನು ಸುಟ್ಟು ಹಾಕಿದ್ದರಿಂದ, ಮೃತದೇಹ ಯಾರದ್ದು ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ಆರಂಭದಲ್ಲಿ ದೊಡ್ಡ ಸವಾಲಾಗಿತ್ತು. ಇದಕ್ಕೂ ಮುನ್ನ, ಅಂದರೆ ಜನವರಿ 28 ರಂದೇ ಶ್ವೇತಾ (26) ಎಂಬ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು.

ನಾಪತ್ತೆಯಾದ ಶ್ವೇತಾಳ ಪೋಷಕರನ್ನು ಸಂಪರ್ಕಿಸಿದ ಪೊಲೀಸರು, ಆಕೆಯ ತಾಯಿಯ ಡಿಎನ್‌ ಎ (DNA) ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಿದರು. ಡಿಎನ್‌ ಎ ವರದಿ ಬಂದಾಗ ಕಾಡಿನಲ್ಲಿ ಸುಟ್ಟು ಕರಕಲಾಗಿದ್ದ ಶವ ನಾಪತ್ತೆಯಾಗಿದ್ದ ಶ್ವೇತಾಳದ್ದೇ ಎಂಬುದು ಖಚಿತವಾಗಿತ್ತು. ಶವದ ಗುರುತು ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ತುರುವೇಕೆರೆ ಪೊಲೀಸರು ಕೊಲೆಗಾರರ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದರು.

ಮೊಬೈಲ್ ಕಾಲ್ ರೆಕಾರ್ಡ್ಸ್ ಕೊಟ್ಟಿತು ಬಿಗ್ ಕ್ಲೂ!

ಪೊಲೀಸರು ಮೃತ ಶ್ವೇತಾಳ ಮೊಬೈಲ್ ಕರೆಗಳ ವಿವರಗಳನ್ನು (Call Records) ಕೂಲಂಕಷವಾಗಿ ಪರಿಶೀಲಿಸಿದಾಗ, ತುರುವೇಕೆರೆಯ ಮುತ್ತಗದಹಳ್ಳಿಯ ನಿವಾಸಿ ಭಾನುಪ್ರಕಾಶ್ (53) ಎಂಬಾತನೊಂದಿಗೆ ಆಕೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ತಕ್ಷಣವೇ ಅನುಮಾನದ ಆಧಾರದ ಮೇಲೆ ಭಾನುಪ್ರಕಾಶ್‌ನನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಕೊಲೆಗೆ ಕಾರಣವೇನು?

26 ವರ್ಷದ ಶ್ವೇತಾ ಹಾಗೂ 53 ವರ್ಷದ ಭಾನುಪ್ರಕಾಶ್ ನಡುವೆ ಅಕ್ರಮ ಸಂಬಂಧವಿತ್ತುಎನ್ನಲಾಗಿದೆ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಗಲಾಟೆಯಾಗಿದ್ದರಿಂದ ಭಾನುಪ್ರಕಾಶ್ ಆಕೆಯಿಂದ ದೂರವಿದ್ದನು. ಇದೇ ಸಮಯದಲ್ಲಿ ಶ್ವೇತಾ ಮತ್ತೊಬ್ಬ ಯುವಕನ ಜೊತೆಯೂ ಅಕ್ರಮ ಸಂಬಂಧ ಹೊಂದಿರುವುದು ಭಾನುಪ್ರಕಾಶ್‌ ಗೆ ತಿಳಿದುಬಂದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಆತ, ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಯಾರಿಗೂ ಗುರುತು ಸಿಗದಂತೆ ಮಾಡಲು ಅಂಚೆಹಳ್ಳಿ ಕಾಡಿಗೆ ತಂದು ಶವವನ್ನು ಸುಟ್ಟು ಹಾಕಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಸದ್ಯ ಕೊಲೆ ಕೃತ್ಯ ಎಸಗಿದ ಕಿರಾತಕ ಪ್ರಿಯಕರ ಭಾನುಪ್ರಕಾಶ್‌ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 4 ತಿಂಗಳ ಕಾಲ ಅಡಗಿದ್ದ ಮರ್ಡರ್ ಮಿಸ್ಟರಿಯನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ತುರುವೇಕೆರೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

The post ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್! appeared first on nammatumakuru.



from nammatumakuru https://ift.tt/WLfUcZz

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*