ಫೇಸ್‌ ಬುಕ್‌ ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ ದೂರು ದಾಖಲು

ಭಾಸ್ಕರ ಪತ್ರಿಕೆ
0

ಮಂಗಳೂರು: ಗೃಹ ಸಚಿವರು ಹಾಗೂ ಪ್ರಮುಖ ದಲಿತ ನಾಯಕರಾದ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಜಾತಿ ನಿಂದನಾತ್ಮಕ ಪೋಸ್ಟ್ ಪ್ರಕಟಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಮೂಳೂರು ನೇತೃತ್ವದ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ.

ಮಂಗಳೂರು ಕೋಡಿಕಲ್‌ ನ ದತ್ತ ಪ್ಯಾರಡೈಸ್ ಅಪಾರ್ಟ್‌ಮೆಂಟ್ ನಿವಾಸಿಯಾದ ಸಂತೋಷ್ ಶೆಟ್ಟಿ ಎಂಬಾತ ದಿನಾಂಕ 7.06.2026 ರಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸುದ್ದಿವಾಹಿನಿಯೊಂದರ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾನೆ. ಸಚಿವರ ಘನತೆ ಹಾಗೂ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದಲ್ಲದೆ, ದಲಿತ ಸಮುದಾಯದ ವಿರುದ್ಧ ಜಾತಿ ನಿಂದನಾತ್ಮಕ ಪದಗಳನ್ನು ಬಳಸಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಆರೋಪಿಯ ಈ ಕೃತ್ಯವು ಸಮಾಜದಲ್ಲಿ ವೈಮನಸ್ಸು ಉಂಟುಮಾಡುವ ಹಾಗೂ ಪರಿಶಿಷ್ಟ ಜಾತಿ ಸಮುದಾಯದ ಜನರ ಆತ್ಮಗೌರವಕ್ಕೆ ಧಕ್ಕೆ ತರುವಂತದ್ದಾಗಿದೆ. ಇಂತಹ ಹೇಳಿಕೆಗಳು ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಅಪಾಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ನಾಥ್ ಬಲ್ಲಾಳ್ ಬಾಗ್, ರಘುರಾಜ್ ಕದ್ರಿ, ಮೂಡ ಸದಸ್ಯರಾದ ಸುಮನ್ ಬೆಂಗ್ರೆ, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷರಾದ ಅಪ್ಪಿ ಎಸ್, ಕಾರ್ಯದರ್ಶಿ ರವಿ ಸುಂಕದಕಟ್ಟೆ, ಮಹಿಳಾ ಕಾರ್ಯದರ್ಶಿ ಸರೋಜಿನಿ ಬಂಟ್ವಾಳ, ಮಾಜಿ ಕಾರ್ಪೊರೇಟರ್ ವಿಜಯಲಕ್ಷ್ಮಿ, ನಾಗವೇಣಿ, ಮಹೇಶ್ ಬೆಳ್ಳಾರ್ಕರ್ ಹಾಗೂ ಕಮಲಾಕ್ಷ ಬಜಾಲ್ ಸೇರಿದಂತೆ ಜಿಲ್ಲೆಯ ಪರಿಶಿಷ್ಟ ಸಮುದಾಯದ ಪ್ರಮುಖ ನಾಯಕರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

The post ಫೇಸ್‌ ಬುಕ್‌ ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ ದೂರು ದಾಖಲು appeared first on Mahanayaka.



from Mahanayaka https://ift.tt/MUISfTd

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*