ನವದೆಹಲಿ: ಬೆಂಗಳೂರಿನ ಕಸ ವಿಲೇವಾರಿ ಟೆಂಡರ್ ನಲ್ಲಿ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಗಂಭೀರ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಆರ್. ಅಶೋಕ್ ಅವರು ಬೆಂಗಳೂರು ಕಸದ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ, ವಕ್ತಾರರಾಗಿ ಮಾತನಾಡುತ್ತಿದ್ದಾರೆ” ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಈ ಮಾಫಿಯಾವನ್ನು ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೂ ಚರ್ಚೆ ಮಾಡಿದ್ದೆ. ಆದರೆ ಈಗ ಅಶೋಕ್ ಅವರೇ ಈ ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯ ತಂದಿದೆ. ನಾನು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೇ ಅವರು ಈ ರೀತಿಯ ಅಸೂಯೆ ರಾಜಕೀಯ ಮಾಡುತ್ತಿದ್ದಾರೆ,” ಎಂದು ಕಿಡಿಕಾರಿದರು.
“ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರೂ ಇದೇ ರೀತಿ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆ ಮಾಡಲು ಅವಕಾಶ ನೀಡಿದ್ದೆವು, ಆದರೆ ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್ ಮತ್ತು ಚೆನ್ನೈಗೆ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿದ್ದೇನೆ,” ಎಂದು ಸಿಎಂ ಸ್ಪಷ್ಟಪಡಿಸಿದರು.
“ಈಗ ಕಸ ವಿಲೇವಾರಿಗಾಗಿ 6 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಎಲ್ಲೂ ಜಾಗ ಸಿಗದ ಕಾರಣ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇದರೊಂದಿಗೆ ನೈಸ್ ಸಂಸ್ಥೆ ಬಿಟ್ಟಿರುವ ಜಾಗವನ್ನೂ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂದು ಕರೆ ನೀಡಿದ್ದೇನೆ,” ಎಂದರು.
“ಹಿಂದೆ ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ರೂ. ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕಿದೆ. ಅವರು ಯಾವ ತನಿಖೆ ಬೇಕಾದರೂ ಮಾಡಿಸಲಿ, ಎಲ್ಲಾದರೂ ವರದಿ ನೀಡಲಿ. ಆರ್. ಅಶೋಕ್ ಆರೋಪಿಸುತ್ತಿರುವ 36 ಸಾವಿರ ಕೋಟಿ ಇರಲಿ, ಕೇವಲ 10 ಕೋಟಿ ರೂಪಾಯಿ ಹಣ ದುರ್ಬಳಕೆಯಾಗಿದ್ದರೂ ತನಿಖೆ ಎದುರಿಸಲು ನಾನು ಸಿದ್ಧ,” ಎಂದು ಡಿ.ಕೆ. ಶಿವಕುಮಾರ್ ಅವರು ಅಶೋಕ್ ಸವಾಲಿಗೆ ಪ್ರತ್ಯುತ್ತರ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post “ಆರ್. ಅಶೋಕ್ ಕಸ ಮಾಫಿಯಾ ಗ್ಯಾಂಗ್ ನ ಏಜೆಂಟ್: ನನ್ನ ಮೇಲೆ ಅಸೂಯೆ ರಾಜಕೀಯ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು appeared first on nammatumakuru.
from nammatumakuru https://ift.tt/nLwmOK2
