೨೦೨೫ ನೇ ಸಾಲಿನ “ತಿರುಮಲಾಂಬ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ”ಕ್ಕೆ ತಿಪಟೂರಿನ ಕಲ್ಪತರು ಸೆಂಟ್ರೆಲ್ ಶಾಲೆಯ ಶಿಕ್ಷಕಿ ಹಾಗೂ ಲೇಖಕಿ ಲತಾಮಣಿ ಎಂ. ಕೆ. ತುರುವೇಕೆರೆ ಆಯ್ಕೆ

ಭಾಸ್ಕರ ಪತ್ರಿಕೆ
0




ತಿಪಟೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಕೇಂದ್ರ ಸಮಿತಿಯು ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತಿಗಳಿಗೆ ಪ್ರತಿವರ್ಷ ಕೊಡಮಾಡುವ ೨೦೨೫ ನೇ ಸಾಲಿನ “ತಿರುಮಲಾಂಬ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ” ಕ್ಕೆ ತಿಪಟೂರಿನ ಕಲ್ಪತರು ಸೆಂಟ್ರೆಲ್ ಶಾಲೆಯ ಭಾಷಾ ಶಿಕ್ಷಕಿ ಲತಾಮಣಿ ಎಂ. ಕೆ. ತುರುವೇಕೆರೆಯವರ ಸಾಹಿತ್ಯ ಸಾಧನೆ ಪರಿಗಣಿಸಿ ಸದರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲತಾಮಣಿ ಎಂ. ಕೆ. ತುರುವೇಕೆರೆಯವರು ಪ್ರಸ್ತುತ ತಿಪಟೂರಿನ ಕಲ್ಪತರು ಸೆಂಟ್ರೆಲ್ ಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಹಿತ್ಯ ಕ್ಷೇತ್ರದಲ್ಲಿಯೂ ನಿರಂತರ ಸೇವೆ ಗೈಯುತ್ತಿದ್ದಾರೆ. ಈಗಾಗಲೇ “ವಸಂತಗಾನ”(ಕವನ ಸಂಕಲನ), “ಅಕ್ಷಿಯೊಳಗೊಂದಕ್ಷಿ”(ವಿಮರ್ಶೆ), “ಸಮಾಜದೊಡವೆಗಳು”(ಬಿಡಿ ಲೇಖನಗಳು), :ಸೂಜಿಗಣ್ಣು”(ವಿಮರ್ಶೆ), “ಜೀವನ ಮೌಲ್ಯಗಳು”(ಸಂಪಾದಿತ), “ಬೀಜದೊಡಲು”(ಷಟ್ಪದಿ ಸಂಕಲನ), “ಪರಿಪೂರ್ಣ ಬದುಕಿನ ಹದಿನೈದು ಸೂತ್ರಗಳು”(ಚಿಂತನ ಬರಹಗಳು) ಸೇರಿದಂತೆ ಅನೇಕ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿದ್ದಾರೆ.


ಸದರಿ ಪ್ರಶಸ್ತಿಯನ್ನು ೨೦೨೫ ಜನವರಿ ೧೯ ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಡಾ. ಜಾಜಿ ದೇವೇಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಪ್ರದಾನ ಮಾಡಲಿದ್ದಾರೆ. ಪ್ರಸಿದ್ಧ ಸಾಹಿತಿ ರಂಜಾನ್ ದರ್ಗಾ, ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*