ಸಮ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಿದ ಶರಣರ ಒಂದೊಂದು ವಚನಗಳೂ ನುಡಿ ಮುತ್ತುಗಳಾಗಿವೆ: ಲೋಕೇಶ್ವರ್

ಭಾಸ್ಕರ ಪತ್ರಿಕೆ
0



ತಿಪಟೂರು: ಶರಣರ ವಚನಗಳು ನಮಗೆ ದಾರಿದೀಪವಾಗಿದ್ದು, ರಚನೆಯಾಗಿ ಸಾವಿರ ವರ್ಷ ಕಳೆದರೂ ಇಂದಿಗೂ, ಎಂದೆಂದಿಗೂ ಮಾರ್ಗದರ್ಶಕವಾಗಿಯೇ ಉಳಿಯಲು ಕಾರಣ ಶರಣರು ನುಡಿದಂತೆ ನಡೆಯುತ್ತಿದ್ದರು ಹಾಗೂ ನಡೆದಂತೆ ನುಡಿಯುತ್ತಿದ್ದರು. ಜಾತಿ, ವರ್ಗ, ವರ್ಣ, ಲಿಂಗ ಭೇದಗಳನ್ನು ದೂರೀಕರಿಸಿ ಸಮ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಿದ ಶರಣರ ಒಂದೊಂದು ವಚನಗಳೂ ನುಡಿ ಮುತ್ತುಗಳಾಗಿವೆ ಎಂದು ನಿವೃತ್ತ ಎ. ಸಿ.ಪಿ. ಹಾಗೂ ಸಮಾಜ ಸೇ ಕರಾದ ಶರಣ ಲೋಕೇಶ್ವರ್ ರವರು ನುಡಿದರು. ಅವರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಶ್ರೀ ಮದ್ ರಂಭಾಪುರಿ ವಿದ್ಯಾಸಂಸ್ಥೆ ಕಿಬ್ಬನಹಳ್ಳಿ ಕ್ರಾಸ್  ಇಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ, ಶರಣ ಧರ್ಮ ಪ್ರಸಾರ ಹಾಗೂ ವಚನ ಕಂಠಪಾಠ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

        ದತ್ತಿ ಉಪನ್ಯಾಸಕರಾಗಿ ಆಗಮಿಸಿದ್ದ ಶರಣ ನಂ ಶಿವಗಂಗಪ್ಪನವರು ಶರಣರ ಆದರ್ಶ ‌ನಡೆ, ನುಡಿಗಳು ನಮಗೆ ಸದಾ ಪ್ರೇರಕವಾಗಿವೆ, ಉತ್ತಮ ಬದುಕಿನ ಸರಳ ಸೂತ್ರಗಳನ್ನು, ಕಾಯಕದ ಮಹತ್ವವನ್ನು  ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದವರು ವಚನಕಾರರು. ಇದನ್ನು ಸಹಿಸದ ಒಂದು ವರ್ಗ ಸಂಚು ರೂಪಿಸಿ ಶರಣರನ್ನು ಮತ್ತು ಶರಣ ಸಾಹಿತ್ಯವನ್ನು ವ್ಯವಸ್ಥಿತವಾಗಿ ನಾಶಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾದರೂ ಅಳಿದುಳಿದ  ಶರಣ ಸಾಹಿತ್ಯ ನಮಗೆ ಮೌಲ್ಯಯುತವಾಗಿದ್ದು, ಅಂದಿನ ಸಾಮಾಜಿಕ, ರಾಜಕೀಯ, ಬದುಕಿನ ಮೌಲ್ಯಗಳನ್ನು ಮಾದರಿಯಾಗಿ ನೀಡಿವೆ ಎಂದರು. ಇಂದಿನ ಮಕ್ಕಳೇ ನಮ್ಮ ನಾಡಿನ ಆಸ್ತಿಯಾಗಿದ್ದು, ಶರಣರ ವಚನಗಳನ್ನು ಅವರಿಗೆ ಮನದಟ್ಟು ಮಾಡುವ ಮೂಲಕ ಉಳಿಸಿ, ಬೆಳೆಸಬಹುದಾಗಿದೆ ಎಂದರು.

   ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಪಿ. ಆರ್. ಗುರುಸ್ವಾಮಿಯವರು ಶರಣ ಸಂಸ್ಕೃತಿ, ಶರಣ ಸಾಹಿತ್ಯದ ಪ್ರಸಾರ ತಾಲೂಕಿನಲ್ಲಿ ವ್ಯವಸ್ಥಿತವಾಗಿ ನಡೆಯುವಂತಾಗಲು ಕ್ರಿಯಾಶೀಲ ಹೋಬಳಿ ಘಟಕಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ  ಶಾಲಾ, ಕಾಲೇಜುಗಳಲ್ಲಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ದತ್ತಿದಾನಿಗಳ ದಾನಗುಣವನ್ನು ಸ್ಮರಿಸಿ ತಾಲೂಕಿನಲ್ಲಿ ಹದಿನೆಂಟು ದತ್ತಿ ನಿಧಿ ಇದ್ದು, ಕಾಲ ಕಾಲಕ್ಕೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗುವುದೆಂದರು.

      ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಎಂ. ಬಿ. ವಿಜಯಕುಮಾರ್, ನವೀನ್

ಮುಖ್ಯ ಶಿಕ್ಷಕರನ್ನು ಗೌರವಿಸಿ ಸತ್ಕರಿಸಲಾಯಿತು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ  ಶರಣ ಕೆ. ಎಂ. ರಾಜಣ್ಣ , ಶರಣೆ ಎಂ.ಎಸ್. ಸ್ವರ್ಣಗೌರಿ, ಶರಣ ಮಹಲಿಂಗಪ್ಪ ಬಹುಮಾನ ವಿತರಿಸಿದರು.

     ಗೌರವಾಧ್ಯಕ್ಷರಾದ ಶರಣ ಜಗದೀಶ್, ಶರಣೆ ಸ್ವರ್ಣ ಗೌರಮ್ಮ,ಶರಣ ನಂದೀಶಪ್ಪ, ಕು. ಪುಣ್ಯ  ಶುಭ ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಸಮಾರಂಭದಲ್ಲಿ ಉದಯರವಿ ಸಹಕಾರ ಸಂಘದ ಉಪಾಧ್ಯಕ್ಷರಾದ ರಾಜಶೇಖರ್, ನಿರ್ದೇಶಕರಾದ  ಕುಮಾರ ಸ್ವಾಮಿ, ಸದಾಶಿವಯ್ಯ, ಜಯಣ್ಣ, ರುಕ್ಮಿಣಮ್ಮ, ಶುಭ ವಿಶ್ವಕರ್ಮ, ಶಾರದಮ್ಮ, ಮುಂತಾದವರು ಉಪಸ್ಥಿತರಿದ್ದರು.

      ಶರಣೆ ಕಾತ್ಯಾಯಿನಿಯವರ ವಚನದೊಂದಿಗೆ ಪ್ರಾರಂಭವಾದ ಶರಣ ಗೋಷ್ಠಿಗೆ  ಶರಣ ಡಿ.ಎಸ್. ಲೋಕೇಶ್ ಸ್ವಾಗತಿಸಿ, ಶರಣ ಡಿ.ಎಸ್. ಮರುಳಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶರಣ ಹೆಚ್.ಎಸ್. ಮಂಜಪ್ಪ ದತ್ತಿ ದಾನಿಗಳನ್ನು ಪರಿಚಯಿಸಿದರು.

ಶರಣ ಸೋಮಶೇಖರ್ ಮಡೆನೂರು ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*