ಕಲ್ಪತರು ನಾಡಿನಲ್ಲಿ 'ಕುವೆಂಪು ವಿರಚಿತ ಗೀತ ಗಾಯನ'

ಭಾಸ್ಕರ ಪತ್ರಿಕೆ
0


ತಿಪಟೂರು: ಜಗದ ಕವಿ, ಯುಗದ ಕವಿ ವೈಚಾರಿಕ ಜಾಗೃತಿಯನ್ನು ನಾಡಿನೆಲ್ಲೆಡೆ ಮೂಡಿಸಿದ ರಸ ಋಷಿ ಕುವೆಂಪುರವರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ಅವರು ಕೇವಲ ಸಾಹಿತಿ, ನಾಟಕಕಾರ, ಲೇಖಕರು ಮಾತ್ರವಲ್ಲದೆ ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ.

ಮೌಢ್ಯ, ಮೂಢನಂಬಿಕೆಗಳ ವಿರೋಧಿಯಾಗಿದ್ದ ಕುವೆಂಪುರವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕಾವ್ಯ ಸೃಜಿಸಿದ್ದು, ಕನ್ನಡ ಸಾಹಿತ್ಯದ ದೃವತಾರೆಯಾಗಿದ್ದಾರೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಬಸವರಾಜಪ್ಪನವರು ನುಡಿದರು. ಅವರು ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಕ.ಸಾ.ಪ, ಒಕ್ಕಲಿಗರ ಸಂಘ, ಪತ್ರಕರ್ತರ ಸಂಘಗಳ ಸಂಯುಕ್ರಾಶ್ರಯದಲ್ಲಿ ಆಯೋಜಿಸಲಾಗಿದ್ದ 'ಕುವೆಂಪು ವಿರಚಿತ ಗೀತ ಗಾಯನ' ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

   ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ. ನಾಗರಾಜು ನಿವೃತ್ತ ಪ್ರಾಂಶುಪಾಲರು ಮಾತನಾಡುತ್ತಾ ಕುವೆಂಪುರವರ ಮಹತ್ಕೃತಿಗಳಾದ ಮಲೆಗಳಲ್ಲಿ ಮಧು ಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಮಲೆನಾಡಿನ ಜನ ಜೀವನ, ಸಾಮಾಜಿಕ ಕಟ್ಟುಪಾಡುಗಳ ಸುಂದರ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂ ದಾರ್ಶನಿಕ ಕೃತಿಯಾಗಿದ್ದು, ವಾಲ್ಮೀಕಿ ರಾಮಾಯಣದಲ್ಲಿನ ದೋಷಗಳನ್ನು ಸರಿಪಡಿಸಿ ಮತ್ತು ಅಲಕ್ಷಿತ ಪಾತ್ರಗಳನ್ನು ಮನೋವೈಜ್ಞಾನಿಕ ದೃಷ್ಟಿಯಿಂದ  ಚಿತ್ರಿಸಿ ಹೊಸ ರೂಪವನ್ನೇ ನೀಡಿದ್ದಾರೆ. ಮಾನ್ಯರ ಬೆರಳ್ಗೆ ಕೊರಳ್, ಜಲಗಾರ, ಸ್ಮಶಾನ ಕುರುಕ್ಷೇತ್ರಂ ಇತ್ಯಾದಿ ನಾಟಕಗಳು  ಅತ್ಯುತ್ತಮ ನಾಟಕಗಳಾಗಿವೆ. ಮಕ್ಕಳ ಸಾಹಿತ್ಯ, ಕವನ ಸಂಕಲನಗಳು ನಾಡಿನೆಲ್ಲೆಡೆ ಪ್ರಸಿದ್ದಿಯಾಗಿವೆ. ವಿಚಾರ ಕ್ರಾಂತಿಗೆ ಆಹ್ವಾನ ಕೃತಿ ನಾಡಿನ ಯುವ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

      ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಚಿದಾನಂದ್ ರವರು ಮಾತನಾಡಿ ರಸ ಋಷಿ ಕುವೆಂಪುರವರ ಜನ್ಮದಿನದಂದೇ ಆಯೋಜಿಸಲಾಗಿದ್ದ 'ಕುವೆಂಪು ವಿರಚಿತ ಗೀತ ಗಾಯನ ಸ್ಪರ್ಧೆ' ಮಾಜಿ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ರವರ ನಿಧನದಿಂದಾಗಿ ಮುಂದೂಡಲಾಗಿತ್ತು. ಪತ್ರಕರ್ತರ ಸಂಘ, ಸಾಹಿತ್ಯ ಪರಿಷತ್ತುಗಳ ಸಹಕಾರದಿಂದ ಅತ್ಯುತ್ತಮ ಕಾರ್ಯಕ್ರಮದ ಮೂಲಕ ಕುವೆಂಪು ರವರಿಗೆ ಗೌರವ ಸಲ್ಲಿಸುವ  ಕೆಲಸ ನಮಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜನೆ ಮಾಡಲಾಗುವುದು ಎಂದರು.

      ಗೀತ ಗಾಯನ ಸ್ಪರ್ಧೆಯಲ್ಲಿ ಮೂವತ್ತು ಗಾಯಕರು ಭಾಗವಹಿಸಿದ್ದು, ಒಬ್ಬರಿಗಿಂತ ಒಬ್ಬರು ಸುಶ್ರಾವ್ಯವಾಗಿ ಹಾಡಿ ತೀರ್ಪುಗಾರರಿಗೇ ತೀರ್ಪು ನೀಡಲು ಕ್ಲಿಷ್ಟಕರವೆನಿಸಿತು.

      ಪ್ರಥಮ ಸ್ಥಾನ ಶ್ರೀಮತಿ ಮುಕ್ತಾ ತಿಪ್ಪೇಶ್ , ದ್ವಿತೀಯ ಸ್ಥಾನ ಶ್ರೀಮತಿ ಗೀತಾ, ತೃತೀಯ ಸ್ಥಾನವನ್ನು ಶ್ರೀ ಹೆಚ್.ಜಿ. ನರಸಿಂಹ ಮೂರ್ತಿ ಪಡೆದರು. ಬಸವರಾಜು,  ಕೆ.ಎಂ.ರಾಜಣ್ಣ, ಪತ್ರಕರ್ತರಾದ ಸಿದ್ದೇಶ್, ಕುಮಾರಸ್ವಾಮಿ  ಬಹುಮಾನ ವಿತರಿಸಿದರು.

    ತೀರ್ಪುಗಾರರಾಗಿ ಹೇಮಾಬಸವರಾಜು, ಶೈಲಜಾ, ನಿರ್ಮಲ ಭಾಗವಹಿದ್ದರು.

ಶುಭ ವಿಶ್ವಕರ್ಮರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಶ್ರೀ ಎ.ಬಿ. ಚಂದ್ರಶೇಖರ್ ಸ್ವಾಗತಿಸಿ, ಹೆಚ್.ಜೆ. ದಿವಾಕರ್ ವಂದನೆ ಸಲ್ಲಿಸಿದರು. ಹೆಚ್.ಎಸ್. ಮಂಜಪ್ಪ ಕಾರ್ಯಕ್ರಮ ನಿರ್ವಹಿಸಿ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*