ಬೆಂಗಳೂರು: ಮುತ್ತಪ್ಪ ರೈ ಪುತ್ರನ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಿಕ್ಕಿ ರೈ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಹೇಳಿಕೆಯಲ್ಲಿ ರಿಕ್ಕಿ ರೈ ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರಿಕ್ಕಿ ರೈ ಪೊಲೀಸರಿಗೆ ಘಟನೆಯ ಮಾಹಿತಿಯನ್ನು ವಿವರವಾಗಿ ನೀಡಿದ್ದಾರೆ. ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳಾದ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಇವರೇ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ನಾನು ರಷ್ಯಾದಲ್ಲಿದ್ದೆ, ಜಾಮೀನು ವಿವಾದ ಸಂಬಂಧ ಕೋರ್ಟ್ ನಲ್ಲಿ ಕೇಸ್ ಇತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿ ವಾಸವಿರುತ್ತಿದ್ದೆ. 12 ಗಂಟೆಗೆ ಎರಡು ಕಾಲ್ ಬಂದಿತ್ತು. ಹಾಗಾಗಿ ಹೊರಟಿದ್ದೆ.
ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆಗೆ ಬಂದಾಗ ದಾಳಿ ನಡೆಸಲಾಯಿತು. ನನ್ನ ಕೈ ಹಾಗೂ ಮುಗಿಗೆ ಗುಂಡು ತಗಲಿದೆ. ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದರು. ರಾಕೇಶ್ ಮಲ್ಲಿ ಹಾಗೂ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ರಿಕ್ಕಿ ರೈ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅನುರಾಧ, ಸಹಚರರಾದ ರಾಕೇಶ್ ಮಲ್ಲಿ, ನಿತೇಶ್ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

