ಕೆ.ಆರ್.ನಗರ: ಹಳೇ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಉಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ, ವಿಷಯ ಪರಿವೀಕ್ಷಕರಾದ ಮೀನಾಕುಮಾರಿ ಪಾಟೀಲ್ ಹೇಳಿದರು.
ತಾಲ್ಲೂಕಿನ ಮಾವತ್ತೂರು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಸರಳವಾಗಿ ನಡೆದ ಗುರು ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಲಿತ ವಿದ್ಯೆ ಎಂದಿಗೂ ಮರೆಯಲು ಸಾಧ್ಯವಿಲ್ಲ, ತಮ್ಮ ಬಾಲ್ಯದ ನೆನಪಿಗಾಗಿ ಸರ್ಕಾರಿ ಶಾಲೆ ಉಳಿಸಲು ಶ್ರಮಿಸಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಹಲವು ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ವಿಜ್ಞಾನಿಗಳಾಗಿದ್ದಾರೆ ಎಂದರು.
ಅಕ್ಷರ, ಜ್ಞಾನ ನೀಡಿದ ಶಿಕ್ಷಕರನ್ನು ನೆನಪಿಸಿಕೊಂಡು ಗೌರವ ನೀಡಿದಂತೆ ನೀವು ಓದಿದ ಶಾಲೆಗಳ ಕಡೆಯೂ ಗಮನ ಹರಿಸಬೇಕು ಎಂದರು.
ಹಳೇ ವಿದ್ಯಾರ್ಥಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮಹದೇವ್ ಮಾತನಾಡಿ, ಮೀನಾಕುಮಾರಿ ಪಾಟೀಲ್ ಅವರು (ಎಂ.ಆರ್.ಪಿ) ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಸರ್ಕಾರಿ ಪ್ರೌಢ ಶಾಲೆಗೆ 1988ರಂದು ಪ್ರಥಮವಾಗಿ ಕರ್ತವ್ಯಕ್ಕೆ ಹಾಜರಾಗಿ ಅಲ್ಲಿ ಸುಮಾರು 15ಕ್ಕೂ ಹೆಚ್ಚು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡ ನಂತರ, ಕೆ.ಆರ್.ನಗರ, ಮೈಸೂರು ಮತ್ತು ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಧೀರ್ಘ 37ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಮೈಸೂರು ಇಲ್ಲಿನ ವಿಷಯ ಪರಿವೀಕ್ಷಕರ ಹುದ್ದೆಗೆ ಮುಂಬಡ್ತಿ ಹೊಂದಿದ್ದಾರೆ. ನಮ್ಮ ಗುರುಗಳು (ಗ್ರೂಪ್ 'ಬಿ' ವೃಂದದ ಹುದ್ದೆಗೆ) ಅಧಿಕಾರಿಗಳಾಗಿ ಮುಂಬಡ್ತಿ ಹೊಂದಿರುವುದು ನಮಗೆ ಎಲ್ಲಿಲ್ಲದ ಸಂತೋಷವಾಗಿದೆ. ಇದರಿಂದ ಮಾರಗೌಡನಹಳ್ಳಿ ಹಳೇ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಗುರು ವಂದನೆ ಸಲ್ಲಿಸಿದ್ದೇವೆ ಎಂದರು.
ತಾಲ್ಲೂಕಿನ ಮಾವತ್ತೂರು ಮಾರಗೌಡನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ, ಗ್ರಾ.ಪಂ ಸದಸ್ಯ ಕೆ.ಸ್ವಾಮಿ, ಉಪನ್ಯಾಸಕ ರವಿ, ದೇವರಾಜಶೆಟ್ಟಿ ಮಾತನಾಡಿದರು. ಜಿಲ್ಲಾ ರೈತ ಸಂಘ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಮಾನವ ಹಕ್ಕುಗಳ ಆಯೋಗ ನಿವೃತ್ತ ಅಧೀಕ್ಷಕ ಅಶೋಕ ರಾಮಣ್ಣ ಪಾಟೀಲ್, ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಪಾಟೀಲ್, ದಿವ್ಯಾ, ಡೇರಿ ಕಾರ್ಯದರ್ಶಿ ತಿರ್ತೆಶ್, ಶಿಕ್ಷಕ ಮುಕ್ಕಣ್ಣ, ವೆಂಕಟರಾಜು, ಬಸವರಾಜು, ಜಯರಾಮ, ಚಾಮರಾಜು ಸೇರಿದಂತೆ ಹಲವು ಹಳೇ ವಿದ್ಯಾರ್ಥಿಗಳು ಮೀನಾಕುಮಾರಿ ಪಾಟೀಲ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
