ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ ಪತ್ತೆ!

ಭಾಸ್ಕರ ಪತ್ರಿಕೆ
0


ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗುರುವಾರ ಸಂಜೆ ಕೊತ್ತನೂರಿನ ಸಮೃದ್ಧಿ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದ್ದು, 6–7 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ಸುಮಾರು 35 ರಿಂದ 40 ವರ್ಷ ವಯಸ್ಸಿನ ಪುರುಷ ಅಸ್ಥಿಪಂಜರವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕೊತ್ತನೂರು ಠಾಣೆ ಪೊಲೀಸರು, ಸೋಕೋ ತಂಡದ‌ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ದೊಡ್ಡಗುಬ್ಬಿಯ ನಿವಾಸಿ ಶ್ರೀಧರ್ ಎಂಬುವರ ಒಡೆತನದ ಅಪಾರ್ಟ್‌ಮೆಂಟ್ ಕಾಮಗಾರಿ ಕುರಿತು ಹತ್ತು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಆದ್ದರಿಂದ ಅಪಾರ್ಟ್‌ಮೆಂಟ್ ಕಾಮಗಾರಿ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ವ್ಯಾಜ್ಯ ಬಗೆಹರಿದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಕಟ್ಟಡ ಶುಚಿಗೊಳಿಸುವ ಕೆಲಸವನ್ನು ಆರಂಭಿಸಲಾಗಿತ್ತು. ಗುರುವಾರ ಸಂಜೆ ಕಟ್ಟಡದ ನಾಲ್ಕನೇ ಮಹಡಿಯನ್ನು ಶುಚಿಗೊಳಿಸುತ್ತಿದ್ದ ಕಾರ್ಮಿಕರು ಅಸ್ಥಿಪಂಜರವನ್ನು ಗಮನಿಸಿದ್ದಾರೆ.

ಕೂಡಲೇ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕೊತ್ತನೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೊತ್ತನೂರು ಠಾಣೆ ಪೊಲೀಸರು, ಸೋಕೋ ಟೀಂ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ಜೀನ್ಸ್ ಹಾಗೂ ಶರ್ಟ್ ಧರಿಸಿ ಮಲಗಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದ್ದು, ಮೇಲ್ನೋಟಕ್ಕೆ‌ ಸುಮಾರು 35 ರಿಂದ 40 ವರ್ಷದ ಪುರುಷನದ್ದು ಎಂದು ಶಂಕಿಸಲಾಗಿದೆ. ಸದ್ಯ ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*