ತಿಪಟೂರು: ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ’ ಎಂದು ಕೇರಾ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಭಾಸ್ಕರ್ ಬಣ್ಣಿಸಿದರು.
ತಿಪಟೂರು ತಾಲೂಕಿನ ಹಾಸನ ಸರ್ಕಲ್ ನಂದಿನಿ ಡೈರಿ ಆವರಣದಲ್ಲಿ ಪದ್ಮ ವಿಭೂಷಣ, ಕರ್ನಾಟಕ ರತ್ನ ಬಸವ ಶ್ರೀ ಪ್ರಶಸ್ತಿ, ಪುರಸ್ಕೃತರು, ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದು ಪ್ರಖ್ಯಾತಿಯಾದ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆಯನ್ನು ಕರ್ನಾಟಕ ಸಂಪಾದಕರು ಹಾಗೂ ವರದಿಗಾರರು ಸಂಘದ ವತಿಯಿಂದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳತೆಯಿಂದ ಆಚರಣೆ ನಡೆಸಿ ಮಾತನಾಡಿ ಶಿವಕುಮಾರ ಸ್ವಾಮೀಜಿಯು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀಗಳು ಜಾತಿ, ಧರ್ಮ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಅನ್ನ, ವಸತಿ, ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರು’ ಎಂದು ಸ್ಮರಿಸಿದರು.
ಕೆಪಿಸಿಸಿ ಸೇವಾದಳ ಕಾರ್ಯದರ್ಶಿ ಉಮೇಶ್ ಮಾದಿಹಳ್ಳಿ ಮಾತನಾಡಿ ಶಿವಕುಮಾರ ಸ್ವಾಮೀಜಿಯು ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಅವರು 111 ವರ್ಷಗಳ ತುಂಬು ಜೀವನ ನಡೆಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಕರ್ಯ ಕಲ್ಪಿಸಿದರು’ ಎಂದು ಹೇಳಿದರು.
ಜಾಗತಿಕವಾಗಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀಗಳು 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು ನಿರಂತರವಾಗಿ ಶ್ರಮಿಸಿದ ಶ್ರಮಯೋಗಿ. ಯಾವುದೇ ಮತ, ಧರ್ಮಕ್ಕೆ ಸೀಮಿತವಾಗದೆ ಜಾತ್ಯಾತೀತವಾಗಿ ಬದುಕಿ ಬಸವಣ್ಣನ ಮಾದರಿಯಲ್ಲಿ ಸಮಾಜದಲ್ಲಿ ಸಮಾನತೆಯ ದೀವಿಗೆ ಬೆಳಗಿದ ಮಹಾನ್ ಆದರ್ಶವಾದಿ’ ಎಂದರು.
‘12ನೇ ಶತಮಾನದಲ್ಲಿ ಬಸವಣ್ಣರು ಸಾಮಾಜಿಕ ಕ್ರಾಂತಿ ಮಾಡಿದ ರೀತಿಯಲ್ಲಿ ಅಕ್ಷರ ಕ್ರಾಂತಿಗಾಗಿ ಬದುಕನ್ನೇ ಮುಡುಪಾಗಿಟ್ಟ ಶಿವಕುಮಾರ ಸ್ವಾಮೀಜಿಗಳು ಎಂದೆಂದಿಗೂ ಅಮರ. ಸಿದ್ಧಗಂಗಾ ಮಠದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ’ ಎಂದು ತಿಳಿಸಿದರು.
ಅಪರೂಪದ ತಪಸ್ವಿ: ‘ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ಕೇರಾ ಸಂಘದ ತಾಲೂಕು ಅಧ್ಯಕ್ಷರಾದ ಬೆಣ್ಣೆನಹಳ್ಳಿ ಟಿ ರಾಜು ಹೇಳಿದರು.
‘ಬಸವಣ್ಣರ ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆಯಿಟ್ಟಿದ್ದ ಶ್ರೀಗಳು ತ್ರಿವಿಧ ದಾಸೋಹದಲ್ಲಿ ಧರ್ಮ, ಜಾತಿ, ಮತದ ಬೇಧವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಲಕ್ಷಾಂತರ ಮಂದಿಯ ಹಸಿವು ನೀಗಿಸಿ ಸಮಾಜದ ಉಳಿವಿಗೆ ಜ್ಞಾನ ಗಂಗೆ ಹರಿಸಿದರು. ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ’ ಎಂದು ಅಭಿಪ್ರಾಯಪಟ್ಟರು.
‘ಶ್ರೀಗಳು ದೈಹಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ಜನರಿಂದ ದೂರವಾಗಲು ಎಂದಿಗೂ ಸಾಧ್ಯವಿಲ್ಲ. ಗಗನಕ್ಕೆ ಗಗನವೇ ಸಾಟಿ, ಸಾಗರಕ್ಕೆ ಸಾಗರವೇ ಉಪಮೆ ಎಂಬಂತೆ ಸೇವಾ ಕ್ಷೇತ್ರಕ್ಕೆ ಶಿವಕುಮಾರ ಸ್ವಾಮೀಜಿಯೊಬ್ಬರೇ ಸಾಟಿ’ ಎಂದರು.
ಸಂಘದ ಕಾರ್ಯದರ್ಶಿ ಮಂಜುನಾಥ್ ಡಿ ಪತ್ರಕರ್ತರು, ನರಸಿಂಹಮೂರ್ತಿ, ಪುನೀತ್, ಪ್ರಕಾಶ್ ಉಪಾಧ್ಯಕ್ಷರು ಸಿದ್ಧಿವಿನಾಯಕ ಸೇವಾ ಸಂಘ, ನಟರಾಜ್, ಮೋಹನ್ ಹೊನ್ನೇನಹಳ್ಳಿ, ಈಶ್ವರ್, ಕುಮಾರ್ ಟಿ, ಹಾಗೂ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಪದಾಧಿಕಾರಿಗಳು ಭಕ್ತರು ಹಾಜರಿದ್ದರು.
ವರದಿ: ಮಂಜುನಾಥ್ ಡಿ ತಿಪಟೂರು
