ವಿದ್ಯಾರ್ಥಿಗಳು ತಮ್ಮ ಜೀವನದ ಶಿಲ್ಪಿಗಳಾಗಬೇಕು: ಚಿ.ನಿ. ಪುರುಷೋತ್ತಮ್

ಭಾಸ್ಕರ ಪತ್ರಿಕೆ
0

ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕಲ್ಪತರು ಮಕ್ಕಳಾಶ್ರಮಕ್ಕೆ ಉಚಿತ ಶಾಲಾ ಬ್ಯಾಗ್, ನೋಟ್ ಬುಕ್ ಮತ್ತು ಪರಿಕರಗಳ ವಿತರಣೆ.

ತಿಪಟೂರು: ವಿದ್ಯಾರ್ಥಿಗಳು ತಮ್ಮ ನ್ಯೂನತೆಗಳನ್ನು ಮೆಟ್ಟಿನಿಂತು, ಪರಿಶ್ರಮ ಹಾಗೂ ದೃಢ ಸಂಕಲ್ಪದೊಂದಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಿಲ್ಪಿಗಳಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯ ಸಮಿತಿ ಸದಸ್ಯ ಚಿ.ನಿ. ಪುರುಷೋತ್ತಮ್ ತಿಳಿಸಿದರು.

ನಗರದ ಎಸ್.ಬಿ.ಐ ಬ್ಯಾಂಕ್ ಹಿಂಭಾಗದಲ್ಲಿರುವ ಕಲ್ಪತರು ಸೇವಾಶ್ರಮದಲ್ಲಿ ತಾ.ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ದಿ.ಕೆ.ಎಲ್. ಪರಮೇಶ್ವರಯ್ಯನವರ ಸ್ಮರಣಾರ್ಥ ಉಚಿತ ಶಾಲಾ ಬ್ಯಾಗ್,ನೋಟ್‌ಬುಕ್ ಹಾಗೂ ಪರಿಕರಗಳ ವಿತರಣಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಗೂಗಲ್ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ಮಾಹಿತಿಯನ್ನು ತಕ್ಷಣ ಹುಡುಕುವ ಪ್ರವೃತ್ತಿಗೆ ಒಳಗಾಗುತ್ತಿರುವುದು ಜ್ಞಾನಾರ್ಜನೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸೂಕ್ತವಲ್ಲ. ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರ ಓದು ಜ್ಞಾನವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಅನಾಥತ್ವವು ಕೇವಲ ಆರ್ಥಿಕ ಸ್ಥಿತಿಯಿಂದಲ್ಲ,ಪ್ರೀತಿ ಹಾಗೂ ಸಂಸ್ಕಾರಗಳ ಕೊರತೆಯಿಂದ ಉಂಟಾಗುತ್ತದೆ. ವಿದ್ಯೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಕಷ್ಟಪಟ್ಟು ಓದುವವರೇ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಸಮಾಜದಲ್ಲಿ ಆರ್ಥಿಕವಾಗಿ ಸಮೃದ್ಧರಾಗಿದ್ದರೂ ಸಹಾಯ ಮನೋಭಾವವಿಲ್ಲದವರಿದ್ದಾರೆ. ಮತ್ತೊಂದೆಡೆ ಆರ್ಥಿಕವಾಗಿ ದುರ್ಬಲರಾದರೂ ಸಹಾಯ ಮಾಡುವ ಮನಸ್ಸುಳ್ಳವರಿದ್ದಾರೆ. ಇಂತಹ ಸಹಾಯಕ ಮನಸ್ಸುಗಳನ್ನು ಉತ್ತೇಜಿಸಬೇಕು. ಹಾಗೂ ದಿ.ಕೆ.ಎಲ್. ಪರಮೇಶ್ವರಯ್ಯ ಅವರು ಜನಪರ ಕಾಳಜಿಯುಳ್ಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.


ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ಪತ್ರಿಕಾ ರಂಗವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರ ನಾಲ್ಕನೇ ಅಂಗವಾಗಿದೆ. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಿದ್ದುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಕಷ್ಟಪಟ್ಟು ಓದಬೇಕು. ತಂದೆ-ತಾಯಿಗಳು ಅನುಭವಿಸಿದ ಕಷ್ಟಗಳು ನಮಗೆ ಬರಬಾರದೆಂದರೆ ಶಿಕ್ಷಣವೇ ಮುಖ್ಯ ಎಂದು ತಿಳಿಸಿದರು.


ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ,ಪ್ರಗತಿಪರ ಚಿಂತಕ  ಉಜ್ಜಜ್ಜಿ ರಾಜಣ್ಣ ಮಾತನಾಡಿ, ಕಲ್ಪತರು ಮಕ್ಕಳ ಆಶ್ರಮದ ಮಕ್ಕಳಿಗೆ ಶಾಲಾ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕರೆಸಿ ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಈಗಾಗಲೇ ತಾಲೂಕಿನಲ್ಲಿ ಬಿ.ಟಿ.ಕುಮಾರ್ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಅವರ ಕಾರ್ಯ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.


ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಹಾಗೂ ಹಿರಿಯ ಪತ್ರಕರ್ತ ಎನ್.ಭಾನುಪ್ರಶಾಂತ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಕಾಲಘಟ್ಟ. ಈ ಸಮಯದಲ್ಲಿ ಜವಾಬ್ದಾರಿಯಿಂದ ಓದಬೇಕು. ಕಾರ್ಯಕ್ರಮದಲ್ಲಿ ದೊರೆಯುವ ಮಾರ್ಗದರ್ಶನದ ಮಾತುಗಳು ಮಕ್ಕಳ ಜೀವನದ ದಿಕ್ಕನ್ನು ಬದಲಾಯಿಸಬಲ್ಲವು ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಜಿಲ್ಲಾ ಉಪಾಧ್ಯಕ್ಷ ಜಯನುಡಿ ಜಯಣ್ಣ,ಹಿರಿಯ ಪತ್ರಕರ್ತ ಸುವರ್ಣ ಪ್ರಗತಿ ಪರಮೇಶ್, ನಿರ್ದೇಶಕರಾದ ಜಯಣ್ಣ ಬೆಳಗೆರೆ ಮತ್ತು ಮಾರುತಿ (ಕೆಟಿಎಂ), ಆಯೋಜಕ ಮತ್ತು ಸಂಘಟನೆ ಅಧ್ಯಕ್ಷ ಬಿ.ಟಿ.ಕುಮಾರ್,ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ,ಕಂದಾಯಾಧಿಕಾರಿ ರಂಗಪ್ಪ,ನಿವೃತ್ತ ಶಿಕ್ಷಕ ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಜಗೂರು ಮಂಜುನಾಥ್, ಮಂಜುಳಾ ಪರಮೇಶ್, ನಗರಸಭಾ ಮಾಜಿ ಸದಸ್ಯರಾದ ತರಕಾರಿ ಗಂಗಾಧರ್ ಮತ್ತು ಲೋಕನಾಥ ಸಿಂಗ್, ಕಾರ್ಮಿಕ ಮುಖಂಡ ಗೋವಿಂದರಾಜು, ಆಶ್ರಮದ ಶೋಭಾ ವೀರೇಶ್, ಭಾಸ್ಕರ್, ಸಂಘಟನೆ ನಗರ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ರೇಣುಕಾ ಮೂರ್ತಿ ಮತ್ತು ನವೀದ್ ಸೇರಿದಂತೆ ಸಂಘಟನೆ ಮತ್ತು ಕೆಯುಡಬ್ಲ್ಯೂಜೆ ಪದಾಧಿಕಾರಿಗಳು, ಸದಸ್ಯರು, ಮುಖಂಡರುಗಳು ಹಾಗೂ ಪತ್ರಕರ್ತರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*