ಕೊಡೆ, ರೈನ್ ಕೋಟ್ ರೆಡಿ ಮಾಡಿ ಮರ್ರೆ… : 3 ದಿನಗಳಲ್ಲಿ ಅಪ್ಪಳಿಸಲಿದೆ ಮಾನ್ಸೂನ್: ಹವಾಮಾನ ವರದಿ

ಭಾಸ್ಕರ ಪತ್ರಿಕೆ
0

ನವದೆಹಲಿ: ದೇಶದಲ್ಲಿ ತೀವ್ರ ಬೇಸಿಗೆಯ ಬೇಗೆಯಿಂದ ಕಂಗಾಲಾಗಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಒಂದು ಸಮಾಧಾನಕರ ಸುದ್ದಿ ನೀಡಿದೆ. ಈ ವರ್ಷ ನೈಋತ್ಯ ಮುಂಗಾರು ಮಾರುತಗಳು (Monsoon) ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಮೇ 26 ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಇದರಲ್ಲಿ 4 ದಿನಗಳ ವ್ಯತ್ಯಾಸವಿರಬಹುದು).

ಸದ್ಯ ಆಗ್ನೇಯ ಅರಬ್ಬಿ ಸಮುದ್ರ, ಕೊಮೊರಿನ್ ಪ್ರದೇಶ, ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಭಾಗಗಳಲ್ಲಿ ಮುಂಗಾರು ಮುನ್ನಡೆಯಲು ಪೂರಕ ವಾತಾವರಣ ಸೃಷ್ಟಿಯಾಗಿದೆ. ಬಂಗಾಳ ಕೊಲ್ಲಿಯಿಂದ ತಮಿಳುನಾಡಿನವರೆಗೆ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಚುರುಕಾಗಿದೆ. ಕರ್ನಾಟಕ, ಕೇರಳ ಮತ್ತು ಗುಜರಾತ್ ರಾಜ್ಯಗಳ ಹಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕೇರಳದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇಲಾಖೆಯು ಕರಾವಳಿ ತೀರದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದೆ.

ಉತ್ತರ ಭಾರತದಲ್ಲಿ ತೀವ್ರ ಶಾಖದ ಅಲೆ:

ಒಂದೆಡೆ ದಕ್ಷಿಣ ಭಾರತದಲ್ಲಿ ಮಳೆಯ ಮುನ್ಸೂಚನೆ ಇದ್ದರೆ, ಮತ್ತೊಂದೆಡೆ ಉತ್ತರ ಭಾರತದಲ್ಲಿ ಬಿಸಿಲಿನ ಬೇಗೆ ಮುಂದುವರಿದಿದೆ. ಹರಿಯಾಣ, ಚಂಡೀಗಢ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ತಾಪಮಾನವು 44 ರಿಂದ 46 ಡಿಗ್ರಿ ಸೆಲ್ಸಿಯಸ್‌ ವರೆಗೆ ದಾಖಲಾಗುವ ಸಾಧ್ಯತೆಯಿದ್ದು, ಮೇ 27 ರವರೆಗೆ ತೀವ್ರ ಶಾಖದ ಅಲೆ (Heatwave) ಇರಲಿದೆ ಎಂದು ಐಎಂಡಿ ಎಚ್ಚರಿಸಿದೆ. ದೆಹಲಿಯಲ್ಲಿ ಹಗಲಿನ ವೇಳೆಯಲ್ಲಿ ಗಂಟೆಗೆ 45 ಕಿಮೀ ವೇಗದಲ್ಲಿ ಬಿಸಿ ಗಾಳಿ ಬೀಸಲಿದೆ.

ದೆಹಲಿ ಮಾತ್ರವಲ್ಲದೆ ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಒಡಿಶಾ, ತೆಲಂಗಾಣ ಮತ್ತು ಮಧ್ಯಪ್ರದೇಶ ಸೇರಿದಂತೆ ಸುಮಾರು ಎಂಟು ರಾಜ್ಯಗಳಲ್ಲಿ ಈ ವಾರ ಶಾಖದ ಅಲೆಯ ಅಲರ್ಟ್ ಘೋಷಿಸಲಾಗಿದೆ. ರಾತ್ರಿಯ ವೇಳೆಯೂ ತಾಪಮಾನ ಹೆಚ್ಚಿರಲಿದ್ದು, ಜನರಿಗೆ ಸೆಖೆಯಿಂದ ಮುಕ್ತಿ ಸಿಗುವುದು ಕಷ್ಟ ಎನ್ನಲಾಗಿದೆ.

ಈಶಾನ್ಯ ಭಾರತಕ್ಕೆ ಭಾರಿ ಮಳೆ ಭೀತಿ:

ಇದೇ ವೇಳೆ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯದ ಏಳು ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಸ್ಥಳೀಯವಾಗಿ ಪ್ರವಾಹ ಉಂಟಾಗುವ ಭೀತಿಯೂ ಎದುರಾಗಿದೆ. ಒಡಿಶಾ ಮತ್ತು ಬಿಹಾರದ ಕೆಲವು ಕಡೆ ಗಂಟೆಗೆ 70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯ ಸಲಹೆ:

ಶಾಖದ ಅಲೆ ಇರುವ ಪ್ರದೇಶಗಳಲ್ಲಿ: ಮಧ್ಯಾಹ್ನದ ಅವಧಿಯಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯಿರಿ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಿ. ವೃದ್ಧರು ಮತ್ತು ಮಕ್ಕಳು ಜಾಗರೂಕರಾಗಿರಿ.

ಮಳೆ/ಸಿಡಿಲು ಇರುವ ಪ್ರದೇಶಗಳಲ್ಲಿ: ಗುಡುಗು-ಮಿಂಚಿನ ಸಮಯದಲ್ಲಿ ಬಯಲು ಪ್ರದೇಶ ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ವಿದ್ಯುತ್ ಉಪಕರಣಗಳ ಸಂಪರ್ಕ ಕಡಿತಗೊಳಿಸಿ ಮತ್ತು ಪ್ರಯಾಣಿಸುವ ಮುನ್ನ ಸ್ಥಳೀಯ ಹವಾಮಾನ ವರದಿಯನ್ನು ಗಮನಿಸಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

The post ಕೊಡೆ, ರೈನ್ ಕೋಟ್ ರೆಡಿ ಮಾಡಿ ಮರ್ರೆ… : 3 ದಿನಗಳಲ್ಲಿ ಅಪ್ಪಳಿಸಲಿದೆ ಮಾನ್ಸೂನ್: ಹವಾಮಾನ ವರದಿ appeared first on Mahanayaka.



from Mahanayaka https://ift.tt/4WypIm8

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*