ಕೆ.ಆರ್.ಪೇಟೆ: ಸರಳ ಸಜ್ಜನಿಕೆಯ ಹಾಗೂ ಬಡವರ ಹೃದಯ ಮಿಡಿತ ಎಂದೇ ಹೆಸರಾದ ಆರ್.ಟಿ.ಓ ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ‘ರಂಗ ಕುಣಿತ ಸ್ಪರ್ಧೆ’ಯು ಸಾರ್ವಜನಿಕರ ಅಪಾರ ಜನಮನ್ನಣೆ ಗಳಿಸಿತು.
ಈ ಜನಪದ ಕಲಾ ಸ್ಪರ್ಧೆಯಲ್ಲಿ ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದ ಕಲಾತಂಡವು ಭಾಗವಹಿಸಿ, ತನ್ನ ಅದ್ಭುತ ಪ್ರದರ್ಶನದ ಮೂಲಕ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡು ಗ್ರಾಮಕ್ಕೆ ಕೀರ್ತಿ ತಂದಿದೆ.
ಕಣ್ಮನ ಸೆಳೆದ ಶ್ರವಣೂರು ಕಲಾತಂಡದ ಪ್ರದರ್ಶನ:
ಸ್ಪರ್ಧೆಯಲ್ಲಿ ಶ್ರವಣೂರು ಗ್ರಾಮದ ಕಲಾವಿದರು ಶ್ವೇತ ವರ್ಣದ (ಬಿಳಿ) ಉಡುಪು ಧರಿಸಿ, ರೈತರ ಹೆಮ್ಮೆಯ ಸಂಕೇತವಾದ ಹಸಿರು ಶಾಲನ್ನು ಹೊತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸಿದರು. ತಮಟೆ ವಾದಕರ ಉದ್ವೇಗಭರಿತ ತಮಟೆ ಸದ್ದಿನ ತಾಳಕ್ಕೆ ತಕ್ಕಂತೆ ಕಾಲಿಗೆ ಗೆಜ್ಜೆ ಕಟ್ಟಿ ಇವರು ಹಾಕಿದ ಹೆಜ್ಜೆಗಳು ನೆರೆದಿದ್ದ ಸಾವಿರಾರು ಪ್ರೇಕ್ಷಕರ ಕಣ್ಮನ ಸೆಳೆದವು.
ವಯಸ್ಸಿನ ಭೇದವಿಲ್ಲದ ಕಲಾ ಆರಾಧನೆ
ಈ ಪ್ರದರ್ಶನದ ವಿಶೇಷತೆಯೆಂದರೆ, ಕಲಾತಂಡದಲ್ಲಿದ್ದ ಯಾವುದೇ ವಯಸ್ಸಿನ ಭೇದಭಾವವಿಲ್ಲದೆ ಹಿರಿಯರು–ಕಿರಿಯರು ಎಲ್ಲರೂ ಒಂದಾಗಿ ರಂಗದ ಮೇಲೆ ಕುಣಿದು ಕುಪ್ಪಳಿಸಿದರು. ಇಡೀ ಸಾರ್ವಜನಿಕ ಸಮೂಹವೇ ಕಣ್ಣು ತುಂಬಿಕೊಳ್ಳುವಂತೆ ಪ್ರದರ್ಶನ ನೀಡಿದ ಶ್ರವಣೂರು ತಂಡವು ತೀರ್ಪುಗಾರರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಬಹುಮಾನ ಸ್ವೀಕರಿಸಿದ ಗ್ರಾಮಸ್ಥರು ಸಾರ್ವಜನಿಕರೊಂದಿಗೆ ಅತ್ಯಂತ ಸಡಗರದಿಂದ ಖುಷಿ ಹಂಚಿಕೊಂಡರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post ಕೆ.ಆರ್.ಪೇಟೆ: ರಂಗ ಕುಣಿತ ಸ್ಪರ್ಧೆಯಲ್ಲಿ ಶ್ರವಣೂರು ತಂಡಕ್ಕೆ ಪ್ರಥಮ ಬಹುಮಾನ appeared first on nammatumakuru.
from nammatumakuru https://ift.tt/WZusIYh
