ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಅಶ್ಲೀಲ ಚಿತ್ರಗಳನ್ನು ಇಟ್ಟುಕೊಂಡು ಬೆದರಿಕೆಯೊಡ್ಡಿ, ಸುಮಾರು 10 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಸುಪ್ರೀತ್ ಗೌಡ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಂ ಮೂಲಕ ಯುವತಿಯ ಪರಿಚಯ ಮಾಡಿಕೊಂಡು, ಮೆಸೇಜ್‌ಗಳ ಮೂಲಕ ಆಕೆಯ ಮೊಬೈಲ್ ಸಂಖ್ಯೆ ಪಡೆದಿದ್ದನು. ಬಳಿಕ ಬೆದರಿಕೆ ಹಾಕಿ ಯುವತಿಯ ಅಶ್ಲೀಲ ಫೋಟೋಗಳನ್ನು ತರಿಸಿಕೊಂಡ ಆತ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ ಚಿನ್ನಾಭರಣ ನೀಡುವಂತೆ ಪೀಡಿಸಿದ್ದನು. ಹೆದರಿದ ಯುವತಿ ಕಳುಹಿಸಿದ ಲೊಕೇಶನ್‌ಗೆ ಆರೋಪಿಯು ತನ್ನ ಸ್ನೇಹಿತನೊಬ್ಬನನ್ನು ಕಳುಹಿಸಿ ಸುಮಾರು 10 ಪವನ್ ಚಿನ್ನಾಭರಣವನ್ನು ಪಡೆದುಕೊಂಡಿದ್ದನು.
ಅದಾಗ್ಯೂ, ಆರೋಪಿಯು ಮತ್ತೆ ಹೆಚ್ಚುವರಿ ಚಿನ್ನ ನೀಡುವಂತೆ ಯುವತಿಗೆ ಪೀಡಿಸಲು ಪ್ರಾರಂಭಿಸಿದಾಗ ಸಂತ್ರಸ್ತೆ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಯುವತಿಯ ಕುಟುಂಬಸ್ಥರು ಆರೋಪಿಯನ್ನು ಸಂಪರ್ಕಿಸಿದಾಗ ಆತ ಪಡೆದುಕೊಂಡ ಚಿನ್ನಾಭರಣಗಳನ್ನು ಹಿಂತಿರುಗಿಸುವುದಾಗಿ ಹೇಳಿ ಬಳಿಕ ಮೋಸ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
The post ಅಶ್ಲೀಲ ಫೋಟೋ ಇಟ್ಟುಕೊಂಡು ಬೆದರಿಕೆ: ಯುವತಿಯಿಂದ 10 ಪವನ್ ಚಿನ್ನ ದೋಚಿದ ಯುವಕನ ವಿರುದ್ಧ ಕೇಸ್ ದಾಖಲು appeared first on Mahanayaka.
from Mahanayaka https://ift.tt/X5PjTQh
