ಮಾಣಿ: ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪದ ಹಳೀರ ಫ್ಲೈ ಓವರ್ ಬಳಿ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ನಾಲ್ವರು ಮಹಿಳೆಯರು ಹಾಗೂ ಚಾಲಕನಿದ್ದ ಈ ಕಾರು ಉಮ್ರಾ ತರಗತಿ ಮುಗಿಸಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ರಸ್ತೆಯ ಅವ್ಯವಸ್ಥೆಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಪುತ್ತೂರು, ಮಡಿಕೇರಿ ಹಾಗೂ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಸಂಪೂರ್ಣ ಗೊಂದಲಗಳಿಂದ ಕೂಡಿದ್ದು, ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಅತ್ಯಂತ ಕಿರಿದಾಗಿರುವ ಈ ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದೇ ಇರುವುದು ಹಾಗೂ ಯಾವುದೇ ರೀತಿಯ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದು ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
The post ಮಾಣಿಯಲ್ಲಿ ಭೀಕರ ಅಪಘಾತ: ಆಲ್ಟೋ ಕಾರು– ಪಿಕಪ್ ಮುಖಾಮುಖಿ ಡಿಕ್ಕಿ | ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ appeared first on Mahanayaka.
from Mahanayaka https://ift.tt/ZqJdF6L
