ಹಾಸನ / ಮೈಸೂರು: ಕರ್ನಾಟಕ ಸರ್ಕಾರದ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಸಾರ್ವಜನಿಕ ಸಭೆಯೊಂದರಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಹಾಸನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ.
ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಸಚಿವ ಕೆ.ಎಂ. ಶಿವಲಿಂಗೇಗೌಡ, “ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡುವ ಅಧಿಕಾರಿಗಳಿಗೆ ಸಾರ್ವಜನಿಕರು ಗೌರವಯುತವಾಗಿ ಕೊಡುವುದು ಧರ್ಮ. ಆದರೆ ಅಧಿಕಾರಿಗಳು ಬಲವಂತವಾಗಿ ಜನರಿಂದ ಕಸಿದುಕೊಳ್ಳುವುದು ತಪ್ಪು” ಎಂದು ಹೇಳಿದ್ದರು.
ಸಚಿವರ ಈ ಹೇಳಿಕೆಗೆ ಸಭೆಯಲ್ಲಿದ್ದ ಸಾರ್ವಜನಿಕರು ಹಾಗೂ ರೈತರು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. “ಅಧಿಕಾರಿಗಳಿಗೆ ಸರ್ಕಾರ ಈಗಾಗಲೇ ತಿಂಗಳಿಗೆ ಸರಿಯಾಗಿ ಸಂಬಳ ನೀಡುತ್ತಿದೆ. ಹಾಗಿರುವಾಗ ಕೆಲಸ ಮಾಡಿಕೊಡಲು ಸಾರ್ವಜನಿಕರು ಅವರಿಗೆ ಹೆಚ್ಚುವರಿಯಾಗಿ ಹಣವೇಕೆ ನೀಡಬೇಕು?” ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ವಕೀಲ ಎಂ.ಡಿ. ಗೋಪಾಲಗೌಡ ಅವರ ನೇತೃತ್ವದ ವಕೀಲರ ತಂಡ ಹಾಸನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದೆ.
ಸಚಿವರು ಸಾರ್ವಜನಿಕವಾಗಿ ಲಂಚ ನೀಡುವಂತೆ ಪ್ರಚೋದನೆ ನೀಡುತ್ತಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯು ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, “ಸಚಿವರ ಹೇಳಿಕೆಯು ಕಾಂಗ್ರೆಸ್ ಸರ್ಕಾರದ ಲಂಚಗುಳಿತನ ಹಾಗೂ ಭ್ರಷ್ಟಾಚಾರದ ನೈಜ ಮುಖವನ್ನು ಬಯಲುಗೊಳಿಸಿದೆ” ಎಂದು ಆರೋಪಿಸಿದೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಚಿವ ಶಿವಲಿಂಗೇಗೌಡ, “ನಾನು ಯಾರಿಗೂ ಲಂಚ ನೀಡುವಂತೆ ಹೇಳಿಲ್ಲ. ಸಭೆಯಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಕೆಲಸ ಮುಗಿದ ನಂತರ ಅಧಿಕಾರಿಗಳೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಿ ಮತ್ತು ಗೌರವ ನೀಡಿ ಎಂಬ ಅರ್ಥದಲ್ಲಿ ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
The post “ಕೆಲಸ ಮಾಡಿದ ಅಧಿಕಾರಿಗಳಿಗೆ ಕೊಡೋದು ಧರ್ಮ”: ಲಂಚ ನೀಡಲು ಪ್ರೇರಣೆ: ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು appeared first on Mahanayaka.
from Mahanayaka https://ift.tt/XAjQfY4
