ಮಂಗಳೂರು: ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು: ಕಾರ್ಯಕ್ರಮ ಆಯೋಜಕರು, ಕಟ್ಟಡ ಮಾಲಿಕರ ವಿರುದ್ಧ ಎಫ್ ಐಆರ್

ಭಾಸ್ಕರ ಪತ್ರಿಕೆ
0

ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಳೆಯಂಗಡಿ ಸಾಗು ನಿವಾಸಿ, ಇಲ್ಯಾಸ್ ಮತ್ತು ಶಹನಾಝ್ ದಂಪತಿಯ ಪುತ್ರ ಮುಹಮ್ಮದ್ ಶಮ್ಮಾಝ್ (16) ಮೃತ ದುರ್ದೈವಿ. ಈತ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಗಂಭೀರವಾಗಿ ಗಾಯಗೊಂಡು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಮ್ಮಾಝ್, ಚಿಕಿತ್ಸೆ ಫಲಿಸದೆ ತಡರಾತ್ರಿ ನಿಧನರಾಗಿದ್ದಾರೆ.

ಈ ದುರ್ಘಟನೆಯಲ್ಲಿ ಸುರತ್ಕಲ್ ಸೂರಿಂಜೆ ನಿವಾಸಿ ಮುಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರ್‌ ನ ಹನೀಫ್ (23), ಕಾವೂರಿನ ದಾವೂದ್ ಫರ್ಸಿನ್ ಅಹ್ಮದ್ (18) ಹಾಗೂ ಕಸ್ಟಾ ಬೆಂಗ್ರೆಯ ಮುಹಮ್ಮದ್ ಶಾಕೀಲ್ ಹುಸೈನ್ (18) ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಂಘಟಕರು, ಕಟ್ಟಡ ಮಾಲಕರ ವಿರುದ್ಧ ಎಫ್‌ ಐಆರ್:

ವಿದ್ಯಾರ್ಥಿಯ ಸಾವಿಗೆ ಕಾರಣವಾದ ನಿರ್ಲಕ್ಷ್ಯದ ಈ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕಟ್ಟಡದ ಮಾಲಕ ಪರಿಕ್ಷಿತ್ ರೈ ಹಾಗೂ ಕಾರ್ಯಕ್ರಮದ ಸಂಘಟಕ ದಿನಕರ ಶೆಟ್ಟಿ ವಿರುದ್ಧ ಎಫ್‌ ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮೃತ ಶಮ್ಮಾಝ್ ಅವರ ಮೃತದೇಹವನ್ನು ತಡರಾತ್ರಿ ವೆನ್‌ ಲಾಕ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಜೆಪ್ಪುವಿನಲ್ಲಿರುವ ನಿವಾಸಕ್ಕೆ ತರಲಾಗಿದ್ದು, ಝೀನತ್ ಬಕ್ಷ್ ಮಸೀದಿಯ ಖಬರ್‌ಸ್ತಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

The post ಮಂಗಳೂರು: ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು: ಕಾರ್ಯಕ್ರಮ ಆಯೋಜಕರು, ಕಟ್ಟಡ ಮಾಲಿಕರ ವಿರುದ್ಧ ಎಫ್ ಐಆರ್ appeared first on Mahanayaka.



from Mahanayaka https://ift.tt/eCo0UJj

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*