ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು

ಭಾಸ್ಕರ ಪತ್ರಿಕೆ
0

ಚಿಕ್ಕನಾಯಕನಹಳ್ಳಿ: ಹೊನ್ನೇಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಮುಖಂಡರ ಸುದೀರ್ಘ ಮನವಿಗೆ ತಕ್ಷಣವೇ ಸ್ಪಂದಿಸಿರುವ ಶಾಸಕ ಸಿ.ಬಿ.ಸುರೇಶ್‌ ಬಾಬು, ತಾಲೂಕಿನ ಕಸಬಾ ಹೋಬಳಿಯ ದುರ್ಗದಕೆರೆ ಹಾಗೂ ನಾಗತೀಕೆರೆಗಳಿಗೆ ರಂಗನಾಥಪುರದ ಮಾರ್ಗವಾಗಿ ಎತ್ತಿನಹೊಳೆ ಯೋಜನೆಯ ನೀರನ್ನು ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಭಾವನಹಳ್ಳಿ, ಹೊಸಹಳ್ಳಿ, ಹೊನ್ನೇಬಾಗಿ, ಕೋಡಿಹಳ್ಳಿ ಹಾಗೂ ತಿಮ್ಮನಹಳ್ಳಿ ಭಾಗದ ರೈತರು ಶಾಸಕರನ್ನು ಭೇಟಿಯಾಗಿ ನೀರಿನ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸಾವಿರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಜಟಿಲ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲು ದುರ್ಗದಕೆರೆ ಹಾಗೂ ನಾಗತೀಕೆರೆಗಳನ್ನು ತುಂಬಿಸುವುದು ಅತ್ಯಗತ್ಯವಾಗಿದೆ. ಈ ಕೆರೆಗಳನ್ನು ತುಂಬಿಸುವುದರಿಂದ ಸುತ್ತಮುತ್ತಲ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಕುಡಿಯುವ ನೀರಿನ ಅಭಾವಕ್ಕೂ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯ ನೀರನ್ನು ರಂಗನಾಥಪುರ ಮಾರ್ಗವಾಗಿ ಈ ಕೆರೆಗಳಿಗೆ ತಲುಪಿಸುವ ಸಾಧ್ಯತೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ಈಗಾಗಲೇ ಸುದೀರ್ಘ ಚರ್ಚೆ ನಡೆಸಲಾಗಿದೆ. ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಭಾಗಕ್ಕೆ ಎತ್ತಿನಹೊಳೆ ನೀರು ತಲುಪಿದರೆ ಸಾವಿರಾರು ರೈತರ ಕೃಷಿ ಭೂಮಿಗೆ ನೀರಾವರಿ ಅನುಕೂಲವಾಗುವುದರ ಜೊತೆಗೆ, ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಶಾಸಕರ ಈ ತಕ್ಷಣದ ನಿರ್ಧಾರ ಹಾಗೂ ಸ್ಪಂದನೆಗೆ ಹರ್ಷ ವ್ಯಕ್ತಪಡಿಸಿದ ರೈತರು ಮತ್ತು ಮುಖಂಡರು ಮೆಚ್ಚುಗೆ ಸೂಚಿಸಿದರು. ಜೊತೆಗೆ ಸಾಧ್ಯವಾದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಹರಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಹೊನ್ನೆಬಾಗಿ ಹೆಚ್.ಆರ್. ಶಶಿಧರ್, ಲೋಕೋಪಯೋಗಿ ಇಲಾಖೆಯ ತಿಮ್ಮಣ್ಣ, ಮುಖಂಡ ತಿಮ್ಮನಹಳ್ಳಿಯ ಶ್ರೀಹರ್ಷ ಮತ್ತು ಎತ್ತಿನಹೊಳೆ ಯೋಜನೆಯ ಇಂಜಿನಿಯರ್‌ ಗಳು ಉಪಸ್ಥಿತರಿದ್ದರು.

ವರದಿ: ಮಂಜುಸ್ವಾಮಿ ಎಂ.ಎನ್.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

The post ರಂಗನಾಥಪುರ ಮಾರ್ಗವಾಗಿ ದುರ್ಗದಕೆರೆ, ನಾಗತೀಕೆರೆಗೆ ಎತ್ತಿನಹೊಳೆ ನೀರು: ಶಾಸಕ ಸಿ.ಬಿ.ಸುರೇಶ್‌ ಬಾಬು appeared first on nammatumakuru.



from nammatumakuru https://ift.tt/BsSWltf

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*