ಟೈರ್ ಬ್ಲಾಸ್ಟ್ ಆಗಿ ಕೆರೆಗೆ ಉರುಳಿದ ಕಾರು: ಮೂವರು ಪಾರು

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು: ನಗರದ ಮಧ್ಯಭಾಗದಲ್ಲಿರುವ ಬೃಹತ್ ಕೋಟೆಕೆರೆ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಟೈರ್ ಹಠಾತ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಕೆರೆಗೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರು ನಗರದ ಕೋಟೆಕೆರೆ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿನ ಟೈರ್ ಹಠಾತ್ ಬ್ಲಾಸ್ಟ್ ಆದ ಕಾರಣ ಚಾಲಕನ ನಿಯಂತ್ರಣ ಸಂಪೂರ್ಣ ತಪ್ಪಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಬಳಿಕ ಕೆರೆಗೆ ರಕ್ಷಣೆಗಾಗಿ ಹಾಕಲಾಗಿದ್ದ ಕಬ್ಬಿಣದ ಬೇಲಿಯನ್ನು ಮುರಿದುಕೊಂಡು ನೇರವಾಗಿ ಕೋಟೆಕೆರೆಗೆ ಬಿದ್ದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣ ಮುರಿದು ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದೆ.

ಕೆರೆಗೆ ಕಾರು ಬಿದ್ದ ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಧಾವಿಸಿ ತ್ವರಿತ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಮಾಜಿ ಶಾಸಕ ಸಿ.ಟಿ. ರವಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೊಳಗಾದವರ ಹಾಗೂ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕ್ರೇನ್ ಸಹಾಯದಿಂದ ಕೆರೆಯಿಂದ ಕಾರನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಿದ್ದಾರೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

The post ಟೈರ್ ಬ್ಲಾಸ್ಟ್ ಆಗಿ ಕೆರೆಗೆ ಉರುಳಿದ ಕಾರು: ಮೂವರು ಪಾರು appeared first on Mahanayaka.



from Mahanayaka https://ift.tt/GWE0Y4O

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*