ತಿಪಟೂರು: ತಾಲ್ಲೂಕಿನ ಕೆ.ಬಿ.ಕ್ರಾಸ್ ಬಳಿಯ ಶ್ರೀಮದ್ ರಂಭಾಪುರಿ ಪ್ರೌಢಶಾಲಾ ಆವರಣದ ದಿ.ಷಡಕ್ಷರ ದೇವರು ವೇದಿಕೆಯಲ್ಲಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ರೈತರಲ್ಲಿ ಎಷ್ಟು ದಿನ ಕನ್ನಡ ಭಾಷೆ ಉಳಿಯುವುದು ಅಲ್ಲಿಯವರೆಗೂ ಭಾಷೆಗೆ ಎಂದಿಗೂ ಧಕ್ಕೆ ಆಗುವುದಿಲ್ಲ. ಇತ್ತೀಚಿನ ಬ್ಯಾನರ್, ಪ್ಲೆಕ್ಸ್, ಡಿಜೆಗಳ ಆರ್ಭಟದಿಂದ ಕನ್ನಡ ರಾಜ್ಯೋತ್ಸವದ ಸ್ಥಿತಿಯನ್ನು ಅನ್ಯ ಭಾಷಿಗರು ಆಡಿಕೊಳ್ಳುವಂತಾಗಿದೆ, ಪೋಷಕರು ಮಕ್ಕಳಿಗೆ ಒತ್ತಡದ ಇಂಗ್ಲಿಷ್ ಮಾಧ್ಯಮ ಕಲಿಯುವಂತೆ ಪ್ರೇರೇಪಿಸಬಾರದು, ಮೊದಲು ಭಾಷೆಗೆ ಆದ್ಯತೆ ಕಲಿಸಬೇಕು, ಪ್ರಭುತ್ವ ಉಳ್ಳವರ ಪರವಾಗಿರಬಾರದು, ಸರ್ಕಾರಗಳು ಪ್ರತಿ ಶಾಲೆಯಲ್ಲಿಯೂ ಕನ್ನಡ ಕಡ್ಡಾಯಗೊಳಿಸಿದರೆ ಆಂಗ್ಲ ಭಾಷೆ ಕಣ್ಮರೆಯಾಗುತ್ತದೆ, ನಾನು ಹುಟ್ಟಿದ ಕೆ.ಬಿ.ಕ್ರಾಸ್ ಗ್ರಾಮ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿದೆ, ಜಿಲ್ಲೆಯ ಪ್ರಮುಖ 4 ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸ್ಥಳವಾಗಿದೆ, ಇಲ್ಲಿಗೆ ಒಂದು ಸರ್ಕಾರಿ ಸುಸಜ್ಜಿತ ಆಸ್ಪತ್ರೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಒಂದು ಪದವಿ ಪೂರ್ವ ಕಾಲೇಜು, ಉತ್ತಮ ಸ್ಟೇಡಿಯಂ, ಅವಶ್ಯಕತೆ ಇದೆ, ಕೊಬ್ಬರಿ ಬೆಳೆಯುವ ಮುಖ್ಯ ಸ್ಥಳವಾಗಿದ್ದು ನೀರಾವರಿಗೆ ಹೆಚ್ಚಿನ ಆದ್ಯತೆ ಬೇಕಿದೆ, ರಾಜಕಾರಣಿಗಳು, ಪತ್ರಕರ್ತರು ಮುಖ್ಯ ವಾಹಿನಿಗಳು ರೈತರ ಪರವಾಗಿ ನಿಲ್ಲಬೇಕು, ಮನುಷ್ಯ ಸತ್ತರೆ ಮಣ್ಣಿನಲ್ಲಿ ಹಣಬಹುದು, ಮಣ್ಣು ಸತ್ತರೆ ಮರುಭೂಮಿಯಾಗುತ್ತದೆ, ಆದ್ದರಿಂದ ನೀರಾವರಿಗೆ ಕೃಷಿಗೆ ಸರ್ಕಾರಗಳು ಆದ್ಯತೆ ನೀಡಬೇಕು, ರೈತ ಗೀತೆಗೆ ಓಗೂಡಬೇಕು ಎಂದು ಕರೆ ನೀಡಿದರು ಉದ್ಘಾಟನೆಗೊಳಿಸಿದ ನಟರಾಜ್ ಭೂದಾಳ್ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು, ಸರ್ಕಾರಗಳು ಭಾಷೆಗೆ ಪ್ರಾಮುಖ್ಯತೆ ನೀಡಬೇಕು, ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಕಾರ್ಯಕ್ರಮ ಮಾಡಿ 4ನೇ ಸ್ಥಾನದಲ್ಲಿದೆ, ಉತ್ತಮ ಸ್ಥಾನ ಅಲಂಕರಿಸಲು ಸ್ಥಳೀಯ ಶಾಸಕರ ಎಲ್ಲಾ ರೀತಿಯ ನೆರವು ಮತ್ತು ಸಂಘಟಕರ ಪರಿಶ್ರಮ ಭಾಷಾಭಿಮಾನಿಗಳ ಆಸಕ್ತಿ ಮುಖ್ಯವಾಗಿದೆ, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಕನ್ನಡಿಗರ ಕರ್ತವ್ಯವಾಗಿದೆ, ಬಹುತೇಕ ಇಂಗ್ಲಿಷ್ ಪದಗಳು ಕನ್ನಡವನ್ನೇ ಒಳಗೊಂಡಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಷಡಕ್ಷರಿ ಮಾತನಾಡಿ ತಾಲ್ಲೂಕಿನಲ್ಲಿ ಕವಿಗಳು, ಸಾಹಿತಿಗಳು ಮತ್ತು ವಿದ್ಯಾವಂತರಿದ್ದಾರೆ, ಕನ್ನಡ ಕಾರ್ಯಕ್ರಮಗಳ ರೂಪು ರೇಷೆಗೆ ಅಧ್ಯಕ್ಷ ಬಸವರಾಜಪ್ಪ ಮತ್ತು ಪ್ರಾಂಶುಪಾಲ ಶಿವಕುಮಾರ್ ಪ್ರೇರೇಪಿಸುತ್ತಾರೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮ ನಡೆಯಲು ಸಹಕರಿಸುತ್ತೇನೆ, ಈ ಭಾಗದ ಹೇಮಾವತಿ ನೀರು ಯೋಜನೆಗೆ 38 ವರ್ಷಗಳ ಹೋರಾಟದ ಇತಿಹಾಸವಿದೆ, ಎತ್ತಿನಹೊಳೆ ನೀರಿಗಾಗಿ ಶ್ರಮಿಸಿದ್ದೇನೆ, ಮುಂದೆ ಭದ್ರಾ ಯೋಜನೆಯ ನೀರು ತಿಪಟೂರು ತಾಲ್ಲೂಕಿಗೆ ಹರಿಸಲು ಪ್ರಯತ್ನ ಪಡುತ್ತಿದ್ದೇನೆ, ಕೆ.ಬಿ.ಕ್ರಾಸ್ ಬಳಿ ತಿಮ್ಲಾಪುರ ಗ್ರಾಮದ ಹತ್ತಿರ 500 ಕೋಟಿ ವೆಚ್ಚದಲ್ಲಿ 16 ಎಕರೆ ಜಾಗದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಗೃಹ ಸಚಿವರೊಂದಿಗೆ ಜಾಗ ಗುರುತಿಸಿಕೊಂಡಿದ್ದೇನೆ, ಮುಂಬರುವ ದಿನಗಳಲ್ಲಿ ಈ ವಿಧಾನಸಭಾ ಕ್ಷೇತ್ರ ಜನಸಂಖ್ಯೆಯ ಆಧಾರವಾಗಿ ಮಹಿಳಾ ಮೀಸಲಾತಿ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಇದು ಶ್ಲಾಘನೀಯ, 10 ಮಕ್ಕಳಿರುವ ಕನ್ನಡ ಶಾಲೆಗಳನ್ನು ಯಾವುದೇ ಕಾರಣದಿಂದ ಮುಚ್ಚಬಾರದು ಎಂದು ಸರ್ಕಾರದ ಆದೇಶವಿದೆ, ಕನ್ನಡ ಶಾಲೆ ಎಂದಿಗೂ ಮುಚ್ಚುವುದಿಲ್ಲ ಪೋಷಕರ ಸಹಕಾರ ಕನ್ನಡ ಮಾಧ್ಯಮಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.
![]() |
| ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಅವರು ವೃತ್ತಿ ಬದುಕಿನ ಸಿಹಿ-ಕಹಿ ಪ್ರಸಂಗಗಳು ಮತ್ತು ಭಾವ ತನ್ಮಯತೆ ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಂದರ್ಭ |
ಬೆಳಿಗ್ಗೆ 8 ಗಂಟೆಗೆ ತಾಯಿ ಭುವನೇಶ್ವರಿಯ ಮೆರವಣಿಗೆ ನಂದಿ ಧ್ವಜ, ಡೋಳು ಕುಣಿತ, ಸೋಮನ ಕುಣಿತ, ಮುಂತಾದ ಜಾನಪದ ತಂಡದೊಂದಿಗೆ ನೂರಾರು ವಿದ್ಯಾರ್ಥಿಗಳು, ಭಾಷಾಭಿಮಾನಿಗಳು ವೇದಿಕೆಗೆ ಆಗಮಿಸಿದರು, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್, ಹಿಂಡಿಸ್ಥೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಮಲ್ಲೇಶ್ ಧ್ವಜಾರೋಹಣ ನೆರವೇರಿಸಿದರೆ, ಪರಿಷತ್ತಿನ ಧ್ವಜಾರೋಹಣವನ್ನು ಅಧ್ಯಕ್ಷ ಎಂ.ಬಸವರಾಜಪ್ಪ ನೆರವೇರಿಸಿದರು, ಮೆರವಣಿಗೆಯಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ್ ಭಾಗವಹಿಸಿದ್ದರು, ವೇದಿಕೆಯಲ್ಲಿ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ಕೆ.ಪುಟ್ಟರಂಗಪ್ಪ, ಕುಂದೂರು ತಿಮ್ಮಯ್ಯ, ಶಂಕರಪ್ಪ ಬಳ್ಳೇಕಟ್ಟೆ, ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ದಿವಾಕರ್, ಶಾರದಮ್ಮ, ಮಂಜಪ್ಪ, ಸಿದ್ದಗಂಗಮ್ಮ, ರವೀಶ್, ಕೊಟ್ಟಿಗೆಹಳ್ಳಿ ವೆಂಕಟರಾಮಯ್ಯ, ಮಂಜುನಾಥ್, ಸಂತೋಷ್, ಚಿಕ್ಕೋನಹಳ್ಳಿ ಬಸವರಾಜು, ಭಾಸ್ಕರಾಚಾರ್ ಮುಂತಾದವರು ಭಾಗವಹಿಸಿದ್ದರು.

