ಧಾರವಾಡ: ಗ್ಯಾಸ್ ಪೈಪ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ರಜತಗಿರಿಯಲ್ಲಿ ನಡೆದಿದೆ. ಮನೆ ಮನೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಇದಾಗಿದ್ದು, ಏಕಕಾಲಕ್ಕೆ ಎರಡು ಕಡೆಗಳಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಬಗ್ಗೆ ಸ್ಥಳೀಯರಾದ ಉಮೇಶ್ ಕುಲಕರ್ಣಿ ಮಾತನಾಡಿ, 'ಬೆಳಗ್ಗೆ ನೋಡಿದಾಗ ಹೊಗೆ ಬರುತ್ತಿತ್ತು. ನಂತರ ಅದು ಬೆಂಕಿಯಾಯಿತು. ಗ್ಯಾಸ್ ಕಂಪನಿಯವರಿಗೆ ಫೋನ್ ಮಾಡಿದೆ. ಆದ್ರೆ ಅವರು ಇದುವರೆಗೂ ಬಂದಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದು ಕೊನೆಗೂ ಬೆಂಕಿ ಆರಿಸುವಲ್ಲಿ ಸಫಲರಾಗಿದ್ದಾರೆ, ಸಣ್ಣಪುಟ್ಟ ಮಕ್ಕಳು ಇಲ್ಲಿ ಆಟವಾಡುತ್ತಿರುತ್ತಾರೆ. ಇಲ್ಲಿಯೇ ಪಕ್ಕದಲ್ಲಿ ಲೈಟ್ ಕಂಬ ಇದೆ. ಹೀಗಾಗಿ ಕೆಇಬಿಗೆ ಫೋನ್ ಮಾಡಿದ್ದೆ. ಪಕ್ಕದಲ್ಲಿ ತೆಂಗಿನಮರವಿದೆ. ಅದಕ್ಕೆ ಬೆಂಕಿ ಹತ್ತುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.
ಈ ಪೈಪ್ಲೈನ್ ಅಳವಡಿಸಿದ್ದು ಅದಾನಿ ಗ್ರೂಪ್ ಆಫ್ ಕಂಪನಿ ಎಂದು ತಿಳಿದುಬಂದಿದ್ದು, ಸ್ಥಳೀಯರು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರತಿಕ್ರಯಿಸದೇ ಇದ್ದು ನಂತರ, ಪ್ರತಿಕ್ರಯಿಸಿ ಎರಡು ಮೈನ್ ಗ್ಯಾಸ್ ಲೈನ್ ಬಂದ್ ಮಾಡಿದ್ದಾರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
