ವಿಕಲಾಂಗ ಚೇತನ, ಬಡ ಬೀದಿಬದಿ ವ್ಯಾಪಾರಿಗಳನ್ನು ಹೊರದಬ್ಬಿದ ಮನಪಾ: ಜೆಸಿಬಿ ಅಬ್ಬರಕ್ಕೆ ತತ್ತರಿಸಿದ ಬಡ ಜೀವಗಳು

ಭಾಸ್ಕರ ಪತ್ರಿಕೆ
0

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಪಡೀಲ್ ಬಜಾಲ್ ಮುಖ್ಯರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀದಿವ್ಯಾಪಾರ ಮಾಡುತ್ತಿದ್ದ ಇಬ್ಬರು ವಿಕಲಾಂಗ ಚೇತನರ ಅಂಗಡಿಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿರುವುದನ್ನು ಸಿಪಿಐಎಂ ಮತ್ತು ಡಿವೈಎಫ್ ಐ ಬಜಾಲ್ ವಿಭಾಗ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಪಾಲಿಕೆಯಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು ಭೇಟಿ ಮಾಡಿದ ಎಡಪಂಥೀಯ ಸಂಘಟನೆಗಳ ಮುಖಂಡರ ನಿಯೋಗವು ಅವರಿಗೆ ಧೈರ್ಯ ತುಂಬಿ, ಹೋರಾಟಕ್ಕೆ ಬೆಂಬಲ ಘೋಷಿಸಿದೆ.

ಪಡೀಲ್ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹೂವು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಜಾಲ್ ಜಲ್ಲಿಗುಡ್ಡೆ ಹಾಗೂ ಕರ್ಮಾರ್ ಪ್ರದೇಶದ ನಿವಾಸಿಗಳಾದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರ ಬದುಕಿನ ಆಧಾರವನ್ನು ಪಾಲಿಕೆ ಕಸಿದುಕೊಂಡಿದೆ.

ಸುನೀತಾ ಪೂಜಾರಿ: ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ಗಂಡನನ್ನು ಕಳೆದುಕೊಂಡಿದ್ದು, ಮಕ್ಕಳನ್ನು ಸಾಕುವ ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತು ಸ್ವಾವಲಂಬಿ ಬದುಕು ನಡೆಸುತ್ತಿದ್ದರು.

ಚಂದ್ರಹಾಸ ಪೂಜಾರಿ:

ಶೇಕಡಾ 75 ರಷ್ಟು ಅಂಗವೈಕಲ್ಯತೆ ಹೊಂದಿದ್ದರೂ, ಕುಟುಂಬದ ನಿರ್ವಹಣೆ ಮತ್ತು ಮಗಳ ವಿದ್ಯಾಭ್ಯಾಸಕ್ಕಾಗಿ ಇದೇ ವ್ಯಾಪಾರವನ್ನು ನಂಬಿಕೊಂಡಿದ್ದರು.

ಇಂತಹ ಬಡಪಾಯಿ ವ್ಯಾಪಾರಿಗಳ ಮೇಲೆ ಪಾಲಿಕೆ ಆಡಳಿತವು ಪೊಲೀಸ್ ಬಲಪ್ರಯೋಗ ಮಾಡಿ, ಜೆಸಿಬಿ ಬಳಸಿ ವಸ್ತುಗಳನ್ನು ಧ್ವಂಸಗೊಳಿಸಿ, ವಶಪಡಿಸಿಕೊಂಡಿರುವುದು ಅತ್ಯಂತ ಅಮಾನವೀಯ ಎಂದು ಮುಖಂಡರು ಕಿಡಿಕಾರಿದ್ದಾರೆ.


“ಅಲ್ಲಿ ತಲೆ ಎತ್ತಲಿರುವ ಪ್ರಭಾವಿ ಮಾಲಕರ ವ್ಯಾಪಾರ ಮಳಿಗೆಯ (ಮಾಲ್/ಕಾಂಪ್ಲೆಕ್ಸ್) ಹಿತಾಸಕ್ತಿಯನ್ನು ರಕ್ಷಿಸಲು ಬಡ ಬೀದಿಬದಿ ವ್ಯಾಪಾರಿಗಳನ್ನು ಹೊರದಬ್ಬುವ ಪಿತೂರಿ ಇದರ ಹಿಂದೆ ಅಡಗಿದೆ.”

— ಸಿಪಿಐಎಂ, ಡಿವೈಎಫ್ ಐ ಜಂಟಿ ಹೇಳಿಕೆ


ರಾಜಕೀಯ ಪಕ್ಷಗಳ ಮೌನಕ್ಕೆ ಆಕ್ಷೇಪ

ಈ ಬಡ ವ್ಯಾಪಾರಿಗಳ ಮೇಲೆ ದಾಳಿ ನಡೆದಾಗ ಸ್ಥಳೀಯ ಬಿಜೆಪಿ ಅಥವಾ ಕಾಂಗ್ರೆಸ್ ಮುಖಂಡರು ಯಾರೂ ಇವರ ನೆರವಿಗೆ ಧಾವಿಸಿಲ್ಲ ಎಂದು ನಿಯೋಗ ಆರೋಪಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಡವರ ಮೇಲೆ ಜೆಸಿಬಿ ಹರಿಸುವ ನಡೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಮಾದರಿಯನ್ನು ನೆನಪಿಸುತ್ತಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಗಳ ಪ್ರಮುಖ ಬೇಡಿಕೆಗಳು:

  • ಸಂತ್ರಸ್ತ ವ್ಯಾಪಾರಿಗಳಿಗೆ ಪಾಲಿಕೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
  • ಅಲ್ಲಿಯವರೆಗೆ ಅವರು ಹಳೆಯ ಸ್ಥಳದಲ್ಲೇ ವ್ಯಾಪಾರ ಮುಂದುವರಿಸಲು ಅವಕಾಶ ನೀಡಬೇಕು.
  • ಪಾಲಿಕೆ ವಶಪಡಿಸಿಕೊಂಡಿರುವ ಬಡವರ ಎಲ್ಲಾ ಅಮೂಲ್ಯ ವಸ್ತುಗಳನ್ನು ತಕ್ಷಣವೇ ಹಿಂದಿರುಗಿಸಬೇಕು.

ಧ್ವಂಸಗೊಂಡ ಪ್ರದೇಶಕ್ಕೆ ಭೇಟಿ ನೀಡಿದ ನಿಯೋಗದಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಐಎಂ ವಿಭಾಗ ಸಮಿತಿ ಕಾರ್ಯದರ್ಶಿ ದೀಪಕ್ ಬಜಾಲ್, ಜಲ್ಲಿಗುಡ್ಡೆ ಶಾಖಾ ಕಾರ್ಯದರ್ಶಿ ಜಯಪ್ರಕಾಶ್, ಮುಖಂಡರಾದ ಕೇಶವ ಚೌಟ, ಯಶ್ ರಾಜ್ ಬಜಾಲ್, ಸಾಮಾಜಿಕ ಕಾರ್ಯಕರ್ತ ಕಮಲಾಕ್ಷ ಬಜಾಲ್ ಹಾಗೂ ಆಕಾಶ್ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

The post ವಿಕಲಾಂಗ ಚೇತನ, ಬಡ ಬೀದಿಬದಿ ವ್ಯಾಪಾರಿಗಳನ್ನು ಹೊರದಬ್ಬಿದ ಮನಪಾ: ಜೆಸಿಬಿ ಅಬ್ಬರಕ್ಕೆ ತತ್ತರಿಸಿದ ಬಡ ಜೀವಗಳು appeared first on Mahanayaka.



from Mahanayaka https://ift.tt/NaVQZOn

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*