ಛತ್ರಪತಿ ಸಂಭಾಜಿನಗರ (ಔರಂಗಾಬಾದ್): ಐಫೋನ್ ಖರೀದಿಯ ಮಾಸಿಕ ಕಂತು (EMI) ಕಟ್ಟುವ ವಿಚಾರವಾಗಿ ನಡೆದ ಜಗಳವೊಂದು ಇಡೀ ಕುಟುಂಬವನ್ನೇ ಬಲಿಪಡೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. 19 ವರ್ಷದ ಯುವಕ ಹಾಗೂ ಆತನ ಪೋಷಕರು ಬೆಟ್ಟದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಕುನಾಲ್ (19) ಎಂಬ ಯುವಕ ಇತ್ತೀಚೆಗೆ ಐಫೋನ್ ಖರೀದಿಸಿದ್ದನು. ಆದರೆ, ಅದರ ಇಎಂಐ ಕಟ್ಟಲು ಆತನ ಬಳಿ ಹಣವಿರಲಿಲ್ಲ. ಇದೇ ವಿಚಾರವಾಗಿ ಹಣ ನೀಡುವಂತೆ ಆತ ಮನೆಯವರೊಂದಿಗೆ ಜಗಳವಾಡುತ್ತಿದ್ದನು. ಇತ್ತೀಚೆಗೆ ಕಂತು ಕಟ್ಟುವ ವಿಚಾರವಾಗಿ ಆತನ ತಂದೆ ಮುರಳೀಧರ್ ಚಂದಗುಡೆ ಅವರೊಂದಿಗೆ ತೀವ್ರ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡ ಕುನಾಲ್, ಮನೆಯಿಂದ ಹೊರನಡೆದು ವಾಲುಜ್ ಎಂಐಡಿಸಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಸ್ಗಾಂವ್ ಪ್ರದೇಶದಲ್ಲಿರುವ ಬೆಟ್ಟವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು.
ಮೂರು ಗಂಟೆಗಳ ಕಾಲ ಮನವೊಲಿಕೆ:
ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಟ್ಟವೇರಿದ ಮಗನನ್ನು ಕಂಡು ಗಾಬರಿಯಾದ ಪೋಷಕರು ಹಾಗೂ ಸ್ಥಳೀಯರು ಆತನನ್ನು ಕೆಳಗಿಳಿಯುವಂತೆ ಸತತ ಮೂರು ಗಂಟೆಗಳ ಕಾಲ ಬೇಡಿಕೊಂಡರು. ಆತನಿಗೆ ಹೊಸ ‘ಐಫೋನ್ 15 ಪ್ರೋ’ ಕೊಡಿಸುವುದಾಗಿಯೂ ಕೆಲವರು ಭರವಸೆ ನೀಡಿದರು. “ನಿನ್ನ ತಾಯಿಗಾಗಿ ಬದುಕು, ಈ ರೀತಿ ಮಾಡಿಕೊಳ್ಳಬೇಡ” ಎಂದು ಎಷ್ಟೇ ಅಂಗಲಾಚಿದರೂ ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಕಣ್ಣೆದುರೇ ನಡೆದ ದುರಂತ:
ಮಧ್ಯಾಹ್ನ 1 ಗಂಟೆ ಸುಮಾರಿಗೆ, ಮಗನನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ತಂದೆ ಮುರಳೀಧರ್ ಅವರು ಬೆಟ್ಟದ ತುದಿಗೆ ತೆರಳಿ ಕುನಾಲ್ನನ್ನು ಹಿಂದಕ್ಕೆ ಎಳೆಯಲು ಯತ್ನಿಸಿದರು. ಈ ವೇಳೆ ಇಬ್ಬರೂ ಆಯತಪ್ಪಿ ಪ್ರಪಾತಕ್ಕೆ ಬಿದ್ದರು. ಕಣ್ಣೆದುರೇ ಗಂಡ ಮತ್ತು ಮಗ ಸಾವನ್ನಪ್ಪಿದ್ದನ್ನು ಕಂಡು ತೀವ್ರ ಆಘಾತಕ್ಕೊಳಗಾದ ತಾಯಿ ಸಂಗೀತ ಕೂಡ ಕ್ಷಣಾರ್ಧದಲ್ಲಿ ಅದೇ ಬೆಟ್ಟದಿಂದ ಪ್ರಪಾತಕ್ಕೆ ಜಿಗಿದರು.
ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆರೆದಿದ್ದ ಪ್ರವಾಸಿಗರು ಮತ್ತು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ದಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
The post ಒಂದೇ ಕುಟುಂಬದ ಮೂವರ ಪ್ರಾಣ ಬಲಿ ಪಡೆದ ಐಫೋನ್ EMI: ಮಗನನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ಕಳೆದು ಕೊಂಡ ತಂದೆ ತಾಯಿ appeared first on Mahanayaka.
from Mahanayaka https://ift.tt/kpdPM7x
